ಅರಕಲಗೂಡು: ಪಟ್ಟಣದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಸಾಮಾಜಿಕ ಅಂತರ ಅನ್ನುವುದು ಮರೀಚಿಕೆಯಾಗುತ್ತಿದೆ. ಇಂದು ಕರ್ಣಾಟಕ ಬ್ಯಾಂಕ್ನಲ್ಲಿ ಸಾಮಾಜಿಕ ಅಂತರ ಕಾಪಾಡದೇ ನೂಕುನುಗ್ಗಲು ಉಂಟಾದ ಘಟನೆ ನಡೆದಿದೆ.
ಬೆಳಗ್ಗೆ ಬ್ಯಾಂಕ್ ತೆಗೆಯುವ ಮುನ್ನವೇ ಗ್ರಾಹಕರು ಕುರಿ ಮಂದೆಯಂತೆ ಸೇರತೊಡಗಿದ್ದಾರೆ. 10:30ಕ್ಕೆ ಬ್ಯಾಂಕ್ ಓಪನ್ ಆದ ತಕ್ಷಣ ಸಾಮಾಜಿಕ ಅಂತರ ಲೆಕ್ಕಿಸದೆ ಜನರು ಗುಂಪಿನಲ್ಲಿ ತೆರಳಲು ಶುರು ಮಾಡಿದರು. ಸರತಿ ಸಾಲು ನಿಂತಿದ್ದ ಜನರು ಸಾಮಾಜಿಕ ಅಂತರ ಕಾಪಾಡುವುದಿರಲಿ, ಕನಿಷ್ಠ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ. ಇದರಿಂದ ಕೆಲವರು ಸಿಟ್ಟಿನಿಂದ ಸಾಲು ತೊರೆದು ಹೊರ ನಡೆಯಬೇಕಾಯಿತು.
ಕೊರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ಮನವಿ ಮಾಡಿದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ಪಕ್ಕದಲ್ಲಿರುವ ಎಟಿಎಂನಲ್ಲೂ ಜನಸಂದಣಿ ಇದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.