ಹಾಸನ: ಯಗಚಿ ನದಿಯ ದಡದಲ್ಲಿರುವ ಇಲ್ಲಿನ ಗ್ರಾಮ ದೇವತೆ ಅಂತರಘಟ್ಟಮ್ಮ ದೇವಿಯ ಕೊಂಡೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.
ಯಗಚಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಅಂತರಘಟ್ಟಮ್ಮ, ಚಿಕ್ಕಮ್ಮ, ಭೂತಪ್ಪ ಹಾಗೂ ಪರಿವಾರ ದೇವತೆಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ದೇಗುಲದ ಎದುರು ದೇವಿಯನ್ನ ಗದ್ದುಗೆಯಲ್ಲಿ ಕೂರಿಸಿ ಪೂಜಿಸಿದ ಬಳಿಕ, ದೇಗುಲದ ಮುಂಭಾಗದಲ್ಲಿ ಹಾಕಿದ್ದ ಕೆಂಡದ ಮೇಲೆ ದೇವರ ಉತ್ಸವ ಮೂರ್ತಿಗಳನ್ನು ಹೊತ್ತವರು ಕೆಂಡಹಾಯ್ದರು. ನಂತರ ದೇವರಿಗೆ ಹರಕೆ ಹೊತ್ತ ಭಕ್ತರು ಕೂಡಾ ಕೊಂಡ ಹಾಯ್ದು ತಮ್ಮ ಹರಕೆ ತೀರಿಸಿದರು.
ಪ್ರತಿ ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಹರಕೆ ಹೊರುತ್ತಾರೆ. ಮಕ್ಕಳಿಲ್ಲದವರು ಸಂತಾನ ಪ್ರಾಪ್ತಿ, ಮದುವೆಯಾಗದ ಹೆಣ್ಣು ಮಕ್ಕಳು, ಯುವತಿಯರು ಇಲ್ಲಿಗೆ ಬಂದು ಹರಕೆಕಟ್ಟುತ್ತಾರೆ. ಅಷ್ಟೆಯಲ್ಲದೇ ವ್ಯಾಜ್ಯ ತೀರ್ಮಾನವಾದ್ರೆ ಕೂಡಾ ಮುಂದಿನ ವರ್ಷ ಬಂದು ದೇವಾಲಯದಲ್ಲಿ ವಿಶೇಷ ಅನ್ನಸಂತರ್ಪಣೆ ಮಾಡುವುದಾಗಿಯೂ ಹರಕೆಕಟ್ಟಿರುತ್ತಾರೆ.
ಅಲ್ಲದೇ ಚಿಕ್ಕ ಮಕ್ಕಳಿಗೆ ಬಂದಿರುವ ಸಣ್ಣ ಪುಟ್ಟ ಕಾಯಿಲೆಗಳು ದೂರವಾಗಲಿ, ಕುಟುಂಬಕ್ಕೆ ಯಾವುದೇ ಸಂಕಷ್ಟ ಎದುರಾಗದಿರಲಿ ಎಂದು ಕೂಡಾ ಕೆಲವು ದೂರದ ಭಕ್ತರುಗಳು ಆಗಮಿಸಿ ಕೊಂಡೋತ್ಸವದಲ್ಲಿ ಭಾಗಿಯಾಗುತ್ತಾರೆ.
ಒಟ್ಟಾರೆ ಮೂರು ದಿನದಿಂದ ನಡೆಯುತ್ತಿದ್ದ ಅಂತರಘಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ರಥೋತ್ಸವ ಜರುಗುವ ಮೂಲಕ ಇಂದು ಅಂತಿಮ ತೆರೆ ಬಿತ್ತು.
.