ಸಕಲೇಶಪುರ (ಹಾಸನ): ಹಾಲೇಬೇಲೂರು ಗ್ರಾಮದ ಹೇಮಾವತಿ ನದಿ ದಡದಲ್ಲಿ ಮರಳು ಗಣಿಗಾರಿಕೆ ಮಾಡುವಾಗ ಐತಿಹಾಸಿಕ ಚನ್ನಕೇಶವಸ್ವಾಮಿಯ ವಿಗ್ರಹ ಪತ್ತೆಯಾಗಿದೆ.
ಈ ಪುರಾತನ ಕಾಲದ ವಿಗ್ರಹವನ್ನು ಶುಚಿಗೊಳಿಸಿ, ಹೂವಿನ ಅಲಂಕಾರ ಮಾಡಿ ಗ್ರಾಮದಲ್ಲಿರುವ ಚನ್ನಕೇಶವ ದೇವಸ್ಥಾನದ ಮುಂಭಾಗ ತಂದಿಡಲಾಗಿದೆ. ಇದೇ ವೇಳೆ ತಾತ್ಕಾಲಿಕ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಪತ್ತೆಯಾಗಿರುವ ಐತಿಹಾಸಿಕ ವಿಗ್ರಹ ಸುಮಾರು 4ರಿಂದ 4.5ಅಡಿಯಷ್ಟು ಎತ್ತರವಾಗಿದೆ. ಸಾವಿರಾರು ವರ್ಷಗಳ ಕಾಲದಿಂದ ಈ ವಿಗ್ರಹ ಹೇಮಾವತಿ ದಂಡೆಯಲ್ಲಿರುವ ಮರಳಿನ ಅಡಿಯಲ್ಲಿಯೇ ಇತ್ತು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ಜೈಕುಮಾರ್, ನಗರ ಠಾಣೆ ಪಿಎಸ್‌ಐ ಬಸವರಾಜು ಚಿಂಚೋಳಿ ಹಾಗೂ ಕಂದಾಯ ಇಲಾಖೆಯ ಇತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮಸ್ಥ ಕುಮಾರ್, ಈ ಹಿಂದೆ ಬೇಲೂರು ಹಳೇಬೀಡಿನಲ್ಲಿ ದೇವಸ್ಥಾನ ಕಟ್ಟುವ ಮೊದಲು ಹೊಯ್ಸಳರು ಇಲ್ಲಿಗೆ ಬಂದು ದೇವಸ್ಥಾನ ಮಾಡಲು ಪ್ರಾರಂಭಿಸಿದ್ದರು. ಆದರೆ ವಿಗ್ರಹ ಭಿನ್ನವಾಯಿತೆಂದು ಇಲ್ಲಿ ದೇವಾಲಯದ ಕೆಲಸವನ್ನು ಕೈಬಿಟ್ಟು ಅಲ್ಲಿಗೆ ಹೋಗಿ ದೇವಸ್ಥಾನ ಕಟ್ಟಿದರು ಎಂದು ಇತಿಹಾಸ ಹೇಳುತ್ತದೆ. ಕಳೆದ 2 ವರ್ಷಗಳ ಹಿಂದೆ ಮಳೆಯಿಂದ ಗ್ರಾಮದಲ್ಲಿರುವ ಚನ್ನಕೇಶವ ಸ್ವಾಮಿ ದೇವಸ್ಥಾನ ಶಿಥಿಲಗೊಂಡು ಬಿದ್ದು ಹೋಗಿದ್ದರಿಂದ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ ಆರಂಭಿಸಿದ್ದೆವು ಎಂದು ಹೇಳಿದರು.
ಹಳೇ ವಿಗ್ರಹದ ಮಾದರಿಯಲ್ಲೆ ಈ ವಿಗ್ರಹವಿದೆ. ಈ ಹಿನ್ನೆಲೆಯಲ್ಲಿ ಯಥಾವತ್ತಾಗಿ ಇದೇ ವಿಗ್ರಹವನ್ನು ಮೂಲ ವಿಗ್ರಹವನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅನುಮತಿ ನೀಡಬೇಕು ಹಾಗೂ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ತಜ್ಞರು ಇಲ್ಲಿಗೆ ಬಂದು ವಿಗ್ರಹದ ಕುರಿತು ಸಂಶೋಧನೆ ಮಾಡಲೆಂದು ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಜೈಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಹಾಲೇಬೇಲೂರು ಮರಳು ತೆಗೆಯುವ ವೇಳೆ ಐತಿಹಾಸಿಕ ಚನ್ನಕೇಶವ ಸ್ವಾಮಿ ವಿಗ್ರಹ ಸಿಕ್ಕಿದ್ದು ಇದನ್ನು ತಾತ್ಕಾಲಿಕವಾಗಿ ಗ್ರಾಮಸ್ಥರು ತಂದು ಗ್ರಾಮದಲ್ಲಿರುವ ದೇವಸ್ಥಾನದ ಮುಂದೆ ಇಟ್ಟಿದ್ದಾರೆ. ಈ ವಿಗ್ರಹದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: 20 ವರ್ಷಗಳಲ್ಲಿ ವೈಷ್ಣೋದೇವಿ ದೇವಾಲಯಕ್ಕೆ ಹರಿದು ಬಂತು 1800 ಕೆ.ಜಿ ಚಿನ್ನ!