ಹಾಸನ: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತ್ ಮಹಲ್ ತಳಿ ಜಾನುವಾರುಗಳು ರೋಧನೆ ಅನುಭವಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗಿಹಳ್ಳಿ ಸಮೀಪದ ರಾಯಸಮುದ್ರ ಕಾವಲಿನಲ್ಲಿ ಸುಮಾರು 230 ಜಾನುವಾರುಗಳು ತಾವು ಹಾಕಿದ್ದ ಸಗಣಿಯ ಮಧ್ಯೆದಲ್ಲಿ ದಿನ ದೂಡುತ್ತಿವೆ.
ಮೈಸೂರು ಮಹಾರಾಜರ ಕಾಲದಲ್ಲಿ ತರಲಾಗಿದ್ದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಸ್ವಾತಂತ್ರದ ನಂತರ ರಾಜ್ಯ ಸರ್ಕಾರ ಪಶುಸಂಗೋಪನೆ ಮತ್ತು ವೈದ್ಯಕೀಯ ಸೇವಾ ಇಲಾಖೆಗೆ ಹಸ್ತಾಂತರಿಸಿತ್ತು. 1,524 ಎಕರೆ ಪ್ರದೇಶ ಇರುವ ಕೇಂದ್ರದಲ್ಲಿ 234 ಜಾನುವಾರುಗಳಿದ್ದು, ಈ ಕೇಂದ್ರದ ನಿರ್ವಹಣೆಗೆ ಮತ್ತು ಜಾನುವಾರುಗಳ ಕೊಠಡಿಗೆ ಈಗಾಗಲೇ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈಗಿರುವ ಜಾನುವಾರು ಕೊಠಡಿಯ ಅರ್ಧಭಾಗದಷ್ಟು ಪ್ರದೇಶಕ್ಕೆ ಛಾವಣಿ ಇಲ್ಲದೆ ಮಳೆನೀರು ಕೊಟ್ಟಿಗೆಯೊಳಗೆ ಶೇಖರಣೆಯಾಗುತ್ತಿದೆ.
ಜಾನುವಾರುಗಳು ಹಾಕುವ ಸಗಣಿ ತೆಗೆಯದೇ ಇರುವುದರಿಂದ 3 ಅಡಿಗೂ ಹೆಚ್ಚು ಆಳದಲ್ಲಿರುವ ಕೆಸರಿನಲ್ಲಿ ನಿಲ್ಲಲಾಗದೆ, ಮಲಗಲೂ ಸಾಧ್ಯವಾಗದೆ, ನರಕಯಾತನೆ ಅನುಭವಿಸುತ್ತಿವೆ. ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಪಶುವೈದ್ಯಕೀಯ ಮೇಲ್ವಿಚಾರಕಿ, ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲದ ಕೊರತೆ ಇದೆ. ಸರಿಯಾಗಿ ಸಂಬಳ ಆಗುತ್ತಿಲ್ಲ. ಇರುವ ವ್ಯವಸ್ಥೆಯಲ್ಲಿಯೇ ಮಾಡಿಕೊಂಡು ಹೋಗುತ್ತಿದ್ದೇವೆ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದಿದ್ದಾರೆ.