ಹಾಸನ: ಆಲೂರು ಪಟ್ಟಣ ಪಂಚಾಯತ ಚುನಾವಣೆ ಕಾವು ದಿನದಿಂದ ದಿನಕ್ಕೆ ಗರಿಗೆದರುತ್ತಿರುವ ಬೆನ್ನಲ್ಲೇ ಬಂದ ಲೋಕಸಭೆ ಚುನಾವಣೆ ಫಲಿತಾಂಶ ಅಭ್ಯರ್ಥಿಗಳಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಸ್ಥಳೀಯ ಸಂಸ್ಥೆಗಳಿಗೆ ಅಭ್ಯರ್ಥಿಗಳು ಯಾವುದೇ ಪಕ್ಷದ ಹುರಿಯಾಳಾಗಿ ಸ್ಪರ್ಧಿಸಿದ್ದರೂ ಇಲ್ಲಿ ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೇ ಮಣೆ ಹಾಕುತ್ತಾರೆ ಎಂಬುದನ್ನು ಕಡೆಗಣಿಸುವಂತಿಲ್ಲ.
ಸುಮಾರು 6,541 ಜನಸಂಖ್ಯೆ ಹೊಂದಿರುವ ಪಟ್ಟಣ ಪಂಚಾಯತ್‌ನಲ್ಲಿ 11 ವಾರ್ಡ್ಗಳನ್ನು ರಚಿಸಲಾಗಿದೆ. ಸುಮಾರು 4,600 ಮತದಾರರಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಪ್ರತಿ ವಾರ್ಡ್ಗಳಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ವಿಶೇಷವೆಂದರೆ ಪ್ರತಿ ವಾರ್ಡ್ಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತದಾರರು ಒಂದಲ್ಲ ಒಂದು ರೀತಿ ಸಂಬಂಧಿಗಳಾಗಿದ್ದಾರೆ. ಇದರ ಅನುಕೂಲ ಪಡೆದಿರುವ ಅಭ್ಯರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೆ ಸ್ಟೈಲ್‌ನಲ್ಲಿ ಮತದಾರರನ್ನು ಸೆಳೆಯಲು ಮುನ್ನುಗ್ಗುತ್ತಿದ್ದಾರೆ.
ಪಟ್ಟಣದಲ್ಲಿ ಹಾದು ಹೋಗಿರುವ ದ್ವಿಪಥ ರಸ್ತೆ, ಒಂದೆರಡು ಪಾರ್ಕ್ಗಳ ನಿರ್ಮಾಣ, ಶುದ್ಧ ಕುಡಿಯುವ ನೀರು ಘಟಕಗಳು ಹೊರತುಪಡಿಸಿದರೆ ಅನೇಕ ಮೂಲ ಸೌಕರ್ಯಗಳು ನೆನೆಗುದಿಗೆ ಬಿದ್ದಿವೆ. ವಿಶೇಷವೆಂದರೆ 11 ಸದಸ್ಯರಿರುವ ಪಟ್ಟಣ ಪಂಚಾಯತ್ ಆಡಳಿತದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದರೂ, ಸದಸ್ಯರು ಯಾವುದೇ ಚಕಾರ ಎತ್ತದಿರುವುದರಿಂದ ಪ್ರತಿ ಪಕ್ಷ ಇದೆಯೇ ಎಂಬ ಪ್ರಶ್ನೆ ಮೂಡಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂಗೌಡ ಅಬ್ಬರದ ಪ್ರಚಾರ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಮುಂದಿನ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಮಾತನ್ನು ಅವರು ಹೇಳಿದ್ದಾರೆ.