ಹಾಸನ: ಇಡೀ ರಾಜಕೀಯ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಗೆ ಸಂಪೂರ್ಣ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತಮ ಪ್ರಜಾಕಿಯ ಸ್ಥಾಪಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಚಿತ್ರನಟ ಉಪೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹೆಂಡ, ಹಣದ ಮೂಲಕವೇ ಜನತೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಾಭೀತುಪಡಿಸಲು ಮುಂದಾಗಿದ್ದೇವೆ. ಐದು ವರ್ಷಗಳಲ್ಲಿ ಅಭ್ಯರ್ಥಿಗಳು ವಿಶ್ವಾಸ ಕಳೆದುಕೊಂಡರೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರವನ್ನು ಜನತೆಗೆ ನೀಡಲಾಗಿದೆ ಎಂದು ತಿಳಿಸಿದರು.
ಚುನಾವಣೆ ಗೆಲುವಿನ ಸಾಧ್ಯ, ಅಸಾಧ್ಯ ನಂತರದ ಮಾತು. ಮೊದಲು ಪ್ರಯತ್ನ ಮಾಡಬೇಕು. ಇಂದು ಹಳ್ಳಿ, ಹಳ್ಳಿಗಳು, ಮನೆ, ಮನೆಗಳಲ್ಲಿ ಜಾತಿ ರಾಜಕೀಯ ಒಳ ನುಸುಳಿದೆ. 20 ರಿಂದ 40 ಕೋಟಿ ಸುರಿಯುವವರೆ ಚುನಾಚಣೆಗೆ ಸ್ಪರ್ಧಿಸಬೇಕು. ದೊಡ್ಡ, ದೊಡ್ಡ ಪಕ್ಷದವರೇ ಸ್ಪರ್ಧಿಸಬೇಕೆಂದರೆ ಹೇಗೆ?. ಒಂದೇ ಕ್ಷೇತ್ರದಲ್ಲಿ ಒಬ್ಬರೇ ಸತತವಾಗಿ ಗೆಲುವು ಸಾಧಿಸುತ್ತ ಪಾಳೆಗಾರಿಕೆ ಪ್ರದರ್ಶಿಸುತ್ತಿದ್ದರೆ, ಹೊಸಬರಿಗೆ ಅವಕಾಶ ಎಲ್ಲಿಂದ ಸಿಗುತ್ತದೆ. 72 ವರ್ಷಗಳಿಂದ ಪ್ರಭಾವಿಗಳಿಗೇ ರಾಜಕೀಯ ಎಂಬ ಭಾವನೆ ದಟ್ಟವಾಗಿ ಶೇ.20 ರಷ್ಟು ಮಂದಿಗೆ ಮಾತ್ರ ಈ ಕ್ಷೇತ್ರ ಎಂಬ ನಿರಾಶೆ ಮೂಡಿದೆ.
ಇವುಗಳೆಲ್ಲವನ್ನು ಯುವಕರು ಬದಲಿಸುವ ಕಾಲ ಹತ್ತಿರವಿದೆ ಎಂದು ಭವಿಷ್ಯ ನುಡಿದರು. ಹಿಂದಿನಿಂದಲೂ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಚಿತ್ರನಟರನ್ನು ಬಳಸಿಕೊಳ್ಳುತ್ತಿರುವ ವಾಡಿಕೆ ಇದೆ. ಅದು ಅವರವರ ವೈಯಕ್ತಿಕ ವಿಚಾರ. ಪ್ರಜಾಪ್ರಭುತ್ವದಲ್ಲಿ ಜನತೆಯೇ ನಿಜವಾದ ಸ್ಟಾರ್‌ಗಳು. ಈ ವ್ಯವಸ್ಥೆಯನ್ನು ಜನತೆಯೇ ಬದಲಿಸಬೇಕು. ಬದಲಾವಣೆಗೆ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದು ಮಂಡ್ಯದಲ್ಲಿ ಬಂಡಾಯ ಅಭ್ಯರ್ಥಿ ಸುಮಲತಾ ಪ್ರಚಾರಕ್ಕೆ ನಟರನ್ನು ಆಗಮನದ ಬಗ್ಗೆ ಪ್ರತಿಕ್ರಿಯಿಸಿದರು.
ಈಗಾಗಲೇ ಮೊದಲು ಹಂತದಲ್ಲಿ 14 ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಇದೇ 7 ರ ನಂತರ ಇನ್ನುಳಿದ 14 ಅಭ್ಯರ್ಥಿಗಳನ್ನು ಎರಡನೇ ಹಂತದಲ್ಲಿ ಘೋಷಿಸಲಾಗುವುದು ಎಂದರು.