ಹಾಸನ: ಚಿಕಿತ್ಸೆ ಫಲಕಾರಿಯಾಗದಿದ್ದರೂ ರೋಗಿಯಿಂದ ಲಕ್ಷಾಂತರ ರೂ. ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಜಿಲ್ಲಾಧಿಕಾರಿ ಕಛೇರಿ ಮುಂದೆ ರೋಗಿಯ ಜೊತೆ ಕರ್ನಾಟಕ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಜುನಾಥ್ ಎಂಬುವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆ ಸೇರಿದ್ರು. ಇವರು ಬಿಪಿಎಲ್ ಕುಟುಂಬ ಹಿನ್ನೆಲೆಯುಳ್ಳವರಾಗಿದ್ದು, ಆಸ್ಪತ್ರೆಯ ಮುಖ್ಯ ವೈದ್ಯರು ಸಂಪೂರ್ಣವಾಗಿ ಗುಣಪಡಿಸುವುದಾಗಿ ಭರವಸೆ ನೀಡಿದ್ದರಿಂದ ಇವರನ್ನು ಮೇ 30 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಮೊದಲ ಬಾರಿ ಚಿಕಿತ್ಸೆಗೆ 1,50,000 ಸಾವಿರ ರೂ. ಕೊಡಲಾಗಿತ್ತು. ಮತ್ತೆ ತಲೆ ಶಸ್ತ್ರ ಚಿಕಿತ್ಸೆ ಮಾಡಲು 50 ಸಾವಿರ ರೂ. ಕಟ್ಟಿಸಿಕೊಳ್ಳಲಾಯಿತು.
ಇದಾದ ಬಳಿಕ ಸಣ್ಣ ಚಿಕಿತ್ಸೆಗೆಂದು 20 ಸಾವಿರ ರೂ. ಪಡೆದರು. ಇತರೆ ಮೆಡಿಸನ್, ಬೆಡ್ ಚಾರ್ಜ್ ಎಂದು 1 ಲಕ್ಷ ರೂ. ಕಟ್ಟಿಸಿಕೊಂಡರು. ಇಷ್ಟೆಲ್ಲಾ ಹಣ ಖರ್ಚು ಮಾಡಿದರೂ ವೈದ್ಯರು ನೀಡಿದ ಭರವಸೆಯಂತೆ ರೋಗಿಯು ಗುಣಮುಖರಾಗಲಿಲ್ಲ, ಅಲ್ಲದೇ ನಡೆದಾಡಲು ಸಾಧ್ಯವಾಗುತ್ತಿಲ್ಲ. 48 ದಿನಗಳ ನಂತರ ಚಿಕಿತ್ಸೆಗೆಂದು ಹೋದಾಗ ಅವರಿಗೆ ಮುಂದಿನ ಚಿಕಿತ್ಸೆ ಅಗತ್ಯವಿದೆ. ಚಿಕಿತ್ಸೆಗೆ 3 ರಿಂದ 5 ಲಕ್ಷ ವೆಚ್ಚವಾಗುತ್ತದೆ. ಇದನ್ನು ನೀವು ಭರಿಸಬೇಕೆಂದು ಹೇಳಿದರು.
ಬಡವರಾದ ಮಂಜುನಾಥ್ ಕುಟುಂಬ ಈಗಾಗಲೇ ಸಾಕಷ್ಟು ಹಣವನ್ನು ಆಸ್ಪತ್ರೆಗೆ ಸುರಿದಿದ್ದು, ಇನ್ನೂ ಹಣ ಹೊಂದಿಸುವ ಶಕ್ತಿ ಇಲ್ಲ. ಹೀಗಾಗಿ ಆಸ್ಪತ್ರೆಯ ಮಾಲೀಕರನ್ನು ಕರೆಯಿಸಿ ವಿಚಾರಿಸಿ, ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥಿಸುವುದಾಗಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಇನ್ನು ಎಲ್ಲಾದರೂ ಅಪಘಾತವಾದರೆ ಸರಕಾರಿ ತುರ್ತು ಆ್ಯಂಬುಲೆನ್ಸ್ ವಾಹನಗಳು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಬಿಡುತ್ತಾರೆ ಹೊರತು ಸರಕಾರಿ ಆಸ್ಪತ್ರೆ ಬಳಿ ಹೋಗುತ್ತಿಲ್ಲ ಎಂದು ದೂರಿದರು . ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆ ಸೇರಿ ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಕೊಡಬೇಕೆಂದು ನೊಂದ ರೋಗಿಯ ಕುಟುಂಬ ಹಾಗೂ ಪ್ರತಿಭಟನಾಕಾರರು ಮನವಿ ಮಾಡಿಕೊಂಡರು.