ಹಾಸನ: ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹುರುಳಿಲ್ಲ. ಅಫಿಡೆವಿಟ್ ಸಲ್ಲಿಸುವ ಉದ್ದೇಶವೇ ಅಭ್ಯರ್ಥಿಯ ಆಸ್ತಿ ವಿವರ ಹಾಗೂ ಹಿನ್ನೆಲೆ ತಿಳಿದುಕೊಳ್ಳಲು ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಹೇಳಿದ್ದಾರೆ.
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ, ಕಂಪೆನಿಯಲ್ಲಿ ಪಾಲುದಾರಿಕೆ ವಿಷಯವನ್ನು ನಾಮಪತ್ರದಲ್ಲಿ ಮರೆಮಾಚಿದ್ದಾರೆ. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾಗೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗೀಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಸಮ್ಮುಖದಲ್ಲಿ ಇಂದು ವಿಚಾರಣೆಗೆ ಹಾಜರಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅಫಿಡೆವಿಟ್ ಸಲ್ಲಿಸುವ ಮುಖ್ಯ ಉದ್ದೇಶ ಅಭ್ಯರ್ಥಿಯ ಸಂಪೂರ್ಣ ಹಿನ್ನೆಲೆ ತಿಳಿಯುವುದು. ಆತ ವಿದ್ಯಾವಂತನಾ, ಎಷ್ಟು ಆಸ್ತಿ ಹೊಂದಿದ್ದಾನೆ, ಹಾಗೂ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೋ, ಇವೆಲ್ಲ ತಿಳಿಯುತ್ತವೆ ಎಂದು ಟಾಂಗ್ ನೀಡಿದರು.
ಪ್ರಜ್ವಲ್ ಸಲ್ಲಿಸಿರೋ ಅಫಿಡೆವಿಟ್ ಪರಿಶೀಲಿಸುವಂತೆ ದೂರು ನೀಡಿದ್ದೆವು. ಅಲ್ಲದೆ, ಹಿಂದಿನ ಸುಪ್ರೀಂಕೋರ್ಟ್ ಹೀಗೆ ಸುಳ್ಳು ಅಫಿಡೆವಿಟ್ ದಾಖಲೆಗಳನ್ನು ವಜಾ ಮಾಡಿರುವ ಉದಾಹರಣೆಗಳಿವೆ. ಏಪ್ರಿಲ್ 6ರಂದು ವೆಬ್ಸೈಟ್ನಲ್ಲೂ ಮಾಹಿತಿ ತೆಗೆದಾಗ ಅವರ ಪಾಲುದಾರಿಕೆ ಇರುವುದು ಸಾಬೀತಾಗಿದೆ. ಈ ಬಗ್ಗೆ ಚುನಾವಣಾ ಆಯುಕ್ತರು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವರು ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎ.ಮಂಜು ಪರ ವಕೀಲ ವಿಜಿಕುಮಾರ್ ಮಾತನಾಡಿ, ಮೈತ್ರಿ ಅಭ್ಯರ್ಥಿಯ ನಾಮಪತ್ರ ವಜಾಗೊಳಿಸುವಂತೆ ಚುನಾವಣಾಧಿಕಾರಿಗೆ ದೂರು ನೀಡಿದ್ದೆವು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ಸುಳ್ಳು ದಾಖಲೆ ಸಲ್ಲಿಸುವುದರಿಂದ ಜನತೆ ಮೇಲಾಗುವ ತೊಂದರೆಗಳ ಬಗ್ಗೆ ವಿವರಿಸಿದ್ದೇವೆ ಎಂದು ಹೇಳಿದರು.