ಹಾಸನ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಭಾನುವಾರ ಮಧ್ಯಾಹ್ನದ ವೇಳೆಗೆ ಮತ್ತೆ ಆಗಮಿಸಿದ್ದಾನೆ. ಎಡೆಬಿಡದೆ ಸಕಲೇಶಪುರ-ಆಲೂರು, ಬೇಲೂರು, ಹಾಸನ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಮತ್ತೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಕೇರಳ ಹಾಗೂ ಪಕ್ಕದ ಕೊಡಗಿನಲ್ಲಿ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯಲ್ಲೂ ವರುಣನ ಆಗಮನವಾಗಿದೆ. ಮೋಡ ಕವಿದ ವಾತಾವರಣದಿಂದ ಅತಿ ಹೆಚ್ಚು ಮಳೆ ಬರುವ ಸೂಚನೆಯಿದೆ. ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಮಳೆ ಬಾರದೆ ನಿರಾಸೆ ಮೂಡಿಸಿದೆ.
ಜಿಲ್ಲೆಯಲ್ಲಿ ಮಳೆರಾಯನ ಅವಕೃಪೆಯಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ತುಸು ಚಳಿ ಜನತೆಯನ್ನು ಸ್ವೇಟರ್, ಜರ್ಕಿನ್ ಮೊರೆ ಹೋಗುವಂತೆ ಮಾಡಿದೆ.