ಹಾಸನ: ಫೆ.8 ರಿಂದ ಒಂದು ವಾರಗಳ ಕಾಲ ಅಡಿ ಬೈಲು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಆಲೂರು ತಹಶೀಲ್ದಾರ್ ಶಿರೀನ್ ತಾಜ್ ತಿಳಿಸಿ, ಜಾತ್ರಾ ಪರಿವಿಡಿ ವಿವರಿಸಿದರು.
ಫೆ.8ರಂದು ಭರತ್ತೂರು ಹೊಳೆಬದಿಯಲ್ಲಿ ಪ್ರಾರಂಭವಾಗುವ ಜಾತ್ರಾ ಮಹೋತ್ಸವ ಮರುದಿನ ಅಡಿಬೈಲು ಬೆಟ್ಟದ ಮೇಲೆ ವಿಜೃಂಭಣೆಯಿಂದ ಜರುಗಲಿದ್ದು, ರಂಗನಾಥಸ್ವಾಮಿ ಹಾಗೂ ಬಿಂದಿಗಮ್ಮನವರನ್ನು ಮದುವೆ ಮಾಡಿ ಆ ವೈಭವ ಆನಂದಿಸುವುದು ಈ ಜಾತ್ರೆಯ ವಿಶೇಷ ಎಂದರು.
ಕೆ.ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಸುಮಾರು 48 ಹಳ್ಳಿಗಳಿಗೆ ಸಂಬಂಧಿಸಿದ ಅಡಿಬೈಲು ರಂಗನಾಥಸ್ವಾಮಿ ಜಾತ್ರೆ ಸಂಕ್ರಾಂತಿ ಹಬ್ಬದ ದಿನವೇ ಪ್ರಾರಂಭವಾಗುತ್ತದೆ. ಹಬ್ಬದ ದಿನದಂದು ಸುಮಾರು 20 ಹಳ್ಳಿಗಳಿಗೆ ಅಡ್ಡೆ ದೇವರು ಹೋಗುತ್ತದೆ. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ 7 ದಿನ ಮೊದಲು ಬೆಟ್ಟದ ದೇವಾಲಯಕ್ಕೆ ಕರೆತರಲಾಗುತ್ತದೆ ಫೆ.11 ಮತ್ತು 12 ರಂದು ದೊಡ್ಡ ಜಾತ್ರೆ ಹರಿಸೇವೆ ಹಾಗೂ ಫೆ.13ರಂದು ಹಕ್ಕಿನ ಉತ್ಸವ ಜರುಗಲಿದೆ ಎಂದರು.
ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಅರ್ಚಕರು ಮುಡಿಕೊಟ್ಟು, ದೇವಾಲಯದ ಮುಂಭಾಗ ರಂಗೋಲಿಯನ್ನ ಹಾಕಿ, ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಜಾತ್ರಾ ಮಹೋತ್ಸವ ಮುಗಿಯುವವರೆಗೂ ಅರ್ಚಕರು ಹಣ್ಣು ಹಂಪಲು ಸೇವಿಸುವುದರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯದಲ್ಲಿ ಗುರುವಾರ ರಾತ್ರಿ ಬೆಳಗ್ಗೆ ಅಮ್ಮನವರಿಗೆ ಆಸೆ ಹಾಕುವ ವಿಶೇಷ ಪೂಜೆ ನಡೆಯುತ್ತದೆ. ಫೆ. 10ರ ರಾತ್ರಿ ಗಂಡನ ಕಡೆಯವರಾದ ಭರತೂರು ಗ್ರಾಮದವರು ಹೊಳೆಯ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗೆ ಅಮ್ಮನವರನ್ನು ಕರೆತಂದು ಶನಿವಾರ ಇಡೀ ದಿನ ಜಾತ್ರೆ ನಡೆಯುತ್ತದೆ ಎಂದು ವಿವರಿಸಿದರು.
ಇನ್ನು ಬೆಟ್ಟದ ಮೇಲೆ ಫೆ.12ರಂದು ದಿನಪೂರ್ತಿ ಜಾತ್ರೆ ನಡೆಯುತ್ತದೆ. ಹಾಗೇ ಫೆ.13ರಂದು ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ. ನಂತರ ಯುಗಾದಿ ಹಬ್ಬದ ಸಂದರ್ಭದಲ್ಲಿ ಭರತ್ತೂರು ಕಡೆಗೆ ಸೇರುವ ಸುಮಾರು 10 ಗ್ರಾಮಗಳಲ್ಲಿ ಅಡ್ಡೆ ಉತ್ಸವ ನಡೆಯುತ್ತದೆ.
ಕಾಡಾನೆ ಹಾವಳಿ ಇರುವುದರಿಂದ ಜಾತ್ರಾ ಸಂದರ್ಭದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ರಕ್ಷಣೆ ಒದಗಿಸಲಾಗುತ್ತದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಆದ್ದರಿಂದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪ್ರತಿ ವರ್ಷದಂತೆ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಬೇಕು ಎಂದು ತಹಶೀಲ್ದಾರ್ ಶಿರೀನ್ ತಾಜ್ ತಿಳಿಸಿದರು.