ಹಾಸನ :ನಾವು ಈ ಬಾರಿ ಜೆಡಿಎಸ್ಗೆ ವೋಟ್ ಹಾಕಲ್ಲ. ನಾವು ಈ ಸಾರಿ ಬಿಜೆಪಿಗೇ ಮತ ಚಲಾಯಿಸೋದು ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಡಿ. ರೇವಣ್ಣ ಮುಂದೆ ಕೈ ಕಾರ್ಯಕರ್ತರು ರಾಜಾರೋಷವಾಗಿ ಕೂಗಾಡಿದ ಘಟನೆ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆಯಿತು.
ಅರಸೀಕೆರೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇವತ್ತು ಮತಯಾಚಿಸಲು ಪುತ್ರನ ಪರವಾಗಿ ಹೆಚ್. ಡಿ. ರೇವಣ್ಣ ಆಗಮಿಸಿದ್ದರು. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಜೆಡಿಎಸ್ ಪಕ್ಷದವರು ಬಂದಿರುವುದು ಸರಿಯಲ್ಲ. ಇವತ್ತು ತಮ್ಮ ಮಗ ಚುನಾವಣೆಗೆ ನಿಂತಿದ್ದಾನೆ ಎಂಬ ಕಾರಣಕ್ಕೆ ಮತ ಕೇಳಲು ಬಂದಿದ್ದಾರೆ. ಅದೇ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಯಾವುದೇ ಕೆಲಸ ಮಾಡಿ ಕೊಡಬೇಕೆಂದು ಹೋದಾಗ, ಆ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ. ಹಾಗಾಗಿ ಈ ಬಾರಿ ನಾವು ಜೆಡಿಎಸ್ಗೆ ಮತ ಹಾಕುವುದಿಲ್ಲ. ಬದಲಿಗೆ ಬಿಜೆಪಿಗೇ ಮತ ಹಾಕುತ್ತೀವಿ ಎಂದು ರೇವಣ್ಣನ ಸಮ್ಮುಖದಲ್ಲಿಯೇ ಕೂಗಾಡಿ ಗೊಂದಲ ಸೃಷ್ಟಿ ಮಾಡಿದರು.
ಇನ್ನು ವರಿಷ್ಠರ ಮಾತಿಗೆ ನಾವೆಲ್ಲರೂ ಕೂಡ ಬರಬೇಕು. ನಮಗೂ ಕೂಡ ಕಾಂಗ್ರೆಸ್ ಶಕ್ತಿ ಕೊಟ್ಟಿದೆ. ಸಭೆಯನ್ನು ಹಾಳು ಮಾಡುವವರು ಸಭೆಯಿಂದ ಹೊರ ಹೋಗಿ ಎಂದು ಕೆಲ ಕಾಂಗ್ರೆಸ್ ಮುಖಂಡರು ಹೇಳಿದರೂ, ಅದನ್ನ ಕೇಳದೆ ಕಾರ್ಯಕರ್ತರು ರೇವಣ್ಣ ಕ್ಷಮೆಯಾಚಿಸುವವರೆಗೂ ಸಭೆಯಿಂದ ಹೊರ ನಡೆಯಲಿಲ್ಲ.
ಬಳಿಕ ಮಾಜಿ ಸಚಿವ ಬಿ. ಶಿವರಾಂ ಮಾತಾನಾಡಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲವಿದೆ. ಎಲ್ಲ ಗೊಂದಲಗಳು ಬಗೆಹರಿಸಿಕೊಳ್ಳುವುದಕ್ಕಾಗಿ ಇವತ್ತಿನ ಸಭೆಯನ್ನು ಕರೆದಿದ್ದೇವೆ. ನಾವುೂಕೂಡ ಸಾಕಷ್ಟು ಬಾರಿ ಮಾಧ್ಯಮಗಳ ಮೂಲಕ ಜೆಡಿಎಸ್ನವರ ವರ್ತನೆ ಬಗ್ಗೆ ಕಂಡಿಸಿದ್ದೇವೆ. ಆದರೆ, ಈ ಬಾರಿ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಲೋಕಸಭೆಯಲ್ಲೂ ಕೂಡ ಮೈತ್ರಿ ಮಾಡಿಕೊಂಡು ಚುನಾವಣೆ ನಡೆಯುತ್ತಿದೆ. ಎರಡೂ ಪಕ್ಷದ ವರಿಷ್ಠರು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಶಿಸ್ತಿನ ಸಿಪಾಯಿಗಳು. ಪಕ್ಷದ ವರಿಷ್ಠರು ಹೇಳುವ ಅಥವಾ ನೀಡುವ ಸೂಚನೆಗಳಿಗೆ ತಲೆ ಬಾಗಲೇಬೇಕು. ಹಾಗಾಗಿ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಣ್ಣಪುಟ್ಟ ಲೋಪದೋಷಗಳಿದ್ದರೂ ಅವೆಲ್ಲವನ್ನೂ ಮರೆತು ಮತ್ತು ಜೆಡಿಎಸ್ ಅಭ್ಯರ್ಥಿಯಾಗಿರುವ ಪ್ರಜ್ವಲ್ ಅವರನ್ನು ಕೈಹಿಡಿಯ ಬೇಕಾಗಿರೋದು ನಮ್ಮೆಲ್ಲರ ಹೊಣೆ ಎಂದರು.