ಹಾಸನ: ಯೂಟ್ಯೂಬ್ ಅಥವಾ ಫೇಸ್ಬುಕ್ ನೋಡಿಕೊಂಡು ಅವರ ಬಣ್ಣದ ಮಾತುಗಳನ್ನು ನಂಬಿ ನೀವೇನಾದರೂ ಗೊತ್ತಿಲ್ಲದ ತಳಿಯ ಕೋಳಿ ಸಾಕಣೆಗೆ ಬಂಡವಾಳ ಹೂಡಿದ್ರೆ ಜೋಕೆ. ಕೇರಳ ಮೂಲದ ಖದೀಮನೊಬ್ಬ ಅನ್ನದಾತರಿಗೆ ಮೊಸ ಮಾಡಿ ಲಕ್ಷಾಂತರ ರೂ. ಹಣ ದೋಚಿಕೊಂಡು ನಾಪತ್ತೆಯಾಗಿದ್ದಾನೆ.
ಹೌದು, ರೈತರ ಸ್ವಾಭಿಮಾನವನ್ನು ಬಂಡವಾಳ ಮಾಡಿಕೊಂಡ ಕೇರಳ ಮೂಲದ ಎಲ್.ಎಸ್. ಪ್ರಮೋದ್ ಎಂಬಾತ ರೈತರಿಂದ ಲಕ್ಷಾಂತರ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾನೆ. ಈತ BV-380 ಎಂಬ ಕೋಳಿ ತಳಿಯನ್ನು ಖರೀದಿ ಮಾಡಿ, ಈ ಕೋಳಿ ವರ್ಷ ಪೂರ್ತಿ ಮೊಟ್ಟೆ ಇಡುತ್ತದೆ. ಕನಿಷ್ಠ 500 ಕೋಳಿ ಖರೀದಿ ಮಾಡಿದ್ರೆ ಒಂದು ಮೊಟ್ಟೆಯನ್ನು 5 ರೂ.ಗೆ ನಾನೇ ತೆಗೆದುಕೊಳ್ಳುತ್ತೇನೆ ಎಂಬ ಆಮಿಷ ಒಡ್ಡಿ ರೈತರಿಂದ ಐದು ಲಕ್ಷದ ತನಕ ಹಣ ತೆಗೆದುಕೊಂಡು ಕೋಳಿ ಕೊಟ್ಟಿದ್ದಾನೆ. ಈತನ ಬಣ್ಣದ ಮಾತನ್ನು ನಂಬಿ ಚನ್ನರಾಯಪಟ್ಟಣದ ನುಗ್ಗೆಹಳ್ಳಿ ಮೂಲದ ರಾಮ್ ಪ್ರಸಾದ್ ಎಂಬ ರೈತನೊಬ್ಬ ಬರೋಬ್ಬರಿ ಐದು ಲಕ್ಷ ರೂ. ಬಂಡವಾಳ ಹೂಡಿದ್ದು, ಇದೀಗ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.
ರಾಮ್ ಪ್ರಸಾದ್ ಅವರು ಪ್ರಮೋದ್ ಬಳಿ ಐದು ಲಕ್ಷ ರೂ. ಮೌಲ್ಯದ ಕೋಳಿಗಳನ್ನು ತಂದು ಸಾಕಿದ್ದಾರೆ. ನಂತರ ಪ್ರಮೋದ್ ನನಗೆ ನಷ್ಟವಾಗಿದೆ, ಯಾರೂ ಮೊಟ್ಟೆಯನ್ನು ತೆಗೆದುಕೊಳ್ಳುತ್ತಿಲ್ಲ. ಬೇಕಾದ್ರೆ ನಿಮ್ಮ ಕೋಳಿಯನ್ನು ನಾನೇ ಕೊಂಡುಕೊಂಡು 5 ಲಕ್ಷ ಹಣವನ್ನು ವಾಪಸ್ ನೀಡುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿ ರಾಮ್ ಪ್ರಸಾದ್ ತಮ್ಮ ಬಳಿ ಇದ್ದ ಕೋಳಿಗಳನ್ನು ಪ್ರಮೋದ್ಗೆ ವಾಪಸ್ ಮಾರಿದ್ದಾರೆ. ನಂತರ ಕೋಳಿ ಹಣವನ್ನು ನೀಡದೇ ಇತ್ತ ಬೆಳೆದ ಕೋಳಿಗಳನ್ನು ದೋಚಿಕೊಂಡು ಪ್ರಮೋದ್ ಕಾಣೆಯಾಗಿದ್ದಾನೆ.
ಇನ್ನು ಈ ಕುರಿತು ರಾಮ್ ಪ್ರಸಾದ್ ದೂರು ನೀಡಿದ್ದು, ಪ್ರಮೋದ್ ಮೈಸೂರು, ಹಾಸನ ಇತರ ಭಾಗದ ರೈತರಿಗೂ ಲಕ್ಷಾಂತರ ರೂ. ಮೋಸ ಮಾಡಿದ್ದಾನೆ ಎನ್ನುವುದು ಬಯಲಿಗೆ ಬಂದಿದೆ. ವಂಚನೆ ಮಾಡಿದ ಹಣದಿಂದಲೇ ಈತ 400 ಎಕರೆ ಜಮೀನು ಕೊಂಡಿದ್ದಾನೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಆರೋಪಿ ಸೆರೆಗೆ ಮೈಸೂರು ಪೊಲೀಸರು ಬಲೆ ಬೀಸಿದ್ದಾರೆ.