ಹಾಸನ : ಗಂಡನ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಮಡದಿಗೆ ಉದ್ಯೋಗ ಸಿಕ್ಕಿತ್ತು. ಮಹಿಳೆಯು ಕೆಲಸಕ್ಕೆ ಸೇರುವ ಮೊದಲು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ ಕುಟುಂಬಕ್ಕೆ ಹಾಲಿನ ಲಾರಿಯ ರೂಪದಲ್ಲಿ ಜವರಾಯ ಎದುರಾಗಿದ್ದ. ತಡರಾತ್ರಿ ಟಿಟಿ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ 9 ಜನ ಮರಣ ಹೊಂದಿದ್ದರು. ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿ ಗಾಂಧಿನಗರ ಗ್ರಾಮದ ಬಳಿಯ ಶಿವಮೊಗ್ಗ-ಅರಸೀಕೆರೆಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಘಟನೆ ಸಂಭವಿಸಿದೆ.
ಕೆಎಸ್ಆರ್ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ್ ಎಂಬುವರು ಕಳೆದ 2 ವರ್ಷಗಳ ಹಿಂದಷ್ಟೆ ಕೋವಿಡ್ಗೆ ಬಲಿಯಾಗಿದ್ದರು. ಸಾರಿಗೆ ಇಲಾಖೆಯಲ್ಲಿ ಅವರ ಕೆಲಸವನ್ನು ಅನುಕಂಪದ ಆಧಾರದ ಮೇಲೆ ಪತ್ನಿ ಜೈತ್ರಾಳಿಗೆ ನೀಡಲಾಗಿತ್ತು. ಮುಂದಿನ ವಾರದಿಂದ ಆಕೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹಾಜರಾಗುವ ಮುನ್ನ ದೇವರ ದರ್ಶನ ಮಾಡಿ ಕೆಲಸಕ್ಕೆ ಸೇರೋಣ ಅಂತ ಧರ್ಮಸ್ಥಳಕ್ಕೆ ಹೋಗಿ ಬರುವಾಗ ಅಪಘಾತದಲ್ಲಿ ಆಕೆಯೂ ಮೃತಪಟ್ಟಿರುವುದು ಮನಕಲಕುವಂತಿತ್ತು.
ಒಂದೇ ಕುಟುಂಬದವರು: ದಸರಾ ರಜೆಯ ಹಿನ್ನೆಲೆಯಲ್ಲಿ ಅಣ್ಣ-ತಮ್ಮಂದಿರ ಕುಟುಂಬದ ಸದಸ್ಯರು ಒಂದೇ ವಾಹನದಲ್ಲಿ ಧಾರ್ಮಿಕ ಪ್ರವಾಸ ಹೋಗಿದ್ದರು. ಅಪಘಾತದಲ್ಲಿ ದೊಡ್ಡಯ್ಯ ಪತ್ನಿ ಭಾರತಿ, ದೊಡ್ಡಯ್ಯನವರ ಸಹೋದರ ರಮೇಶ್ ಮತ್ತು ಲೀಲಾವತಿ ರಮೇಶ್, ಮೊಮ್ಮಕ್ಕಳಾದ ಧ್ರುವ, ತನ್ಮಯ್ ಸಹ ಮೃತಪಟ್ಟಿದ್ದಾರೆ.
ತಾಯಿ ಮಂಜುಳಾ ಮತ್ತು ದೊಡ್ಡಯ್ಯನ ಪುತ್ರ ಹಾಗೂ ಟಿಟಿ ವಾಹನದ ಚಾಲಕ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರೊಂದಿಗೆ ದೊಡ್ಡಯ್ಯನ ಮತ್ತೊಬ್ಬ ಸಹೋದರ ಕುಮಾರಸ್ವಾಮಿ ಅವರ ಪುತ್ರಿ ಚೈತ್ರಾ ಮತ್ತು ಚೈತ್ರಾ ಅವರ ಮಕ್ಕಳಾದ ಸಮರ್ಥ ಎಸ್.ರಾಯ್ ಮತ್ತು ಸೃಷ್ಟಿ ಕೂಡ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಅವರ ಬಾವ-ಮೈದುನನ ಮಗಳು ವಂದನಾ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಸಾಲಾಪುರದ ಏಳು ಹಾಗೂ ದೊಡ್ಡೇನಹಳ್ಳಿಯ ಇಬ್ಬರು ಸೇರಿದ್ದಾರೆ.
ಡ್ರೈವರ್ ಅರೆಸ್ಟ್ : ಹಾಲಿನ ಟ್ಯಾಂಕರ್ ಸಾಗುವ ದಿಕ್ಕಿನಲ್ಲಿ ಸಾಗದೇ, ವಿರುದ್ಧ ದಿಕ್ಕಿನಲ್ಲಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಇಂತಹುದೊಂದು ಘಟನೆ ಅರಸೀಕರೆಯ ಬಾಣಾವಾರದಲ್ಲಿ ನಡೆದಿದೆ. ಅಪಘಾತದ ಬಳಿಕ ತಲೆಮರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ನವೀನ್ನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ