ಹಾಸನ: ಮನೆಯಿಂದ ದೇವಾಸ್ಥಾನಕ್ಕೆಂದು ಹೊರಟಿದ್ದ ಕುಟುಂಬದಲ್ಲಿ ದುರಂತ ನಡೆದಿದೆ. ಒಂದೇ ಬೈಕಿನಲ್ಲಿ 5 ಮಂದಿ ಪ್ರಯಾಣಿಸಿದ ತಪ್ಪಿಗೆ ಬೈಕ್ ಸವಾರ ತನ್ನ ಪ್ರಾಣ ಕಳೆದುಕೊಂಡಿದ್ದರೆ, ಆತನ ಮಗಳು ಅರೆ ಪ್ರಜ್ಞಾವಸ್ಥೆಗೆ ಹೋಗಿದ್ದು, ಮೂರು ಮಂದಿ ಮೊಮ್ಮಕ್ಕಳ ಪರಿಸ್ಥಿತಿ ಕೂಡ ಚಿಂತಾಜನಕವಾಗಿದೆ.
ಇಂತಹ ಮನಕಲಕುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಹಿರೀಸಾವೆಯ ಸಮೀಪದ ಬೂಕನಬೆಟ್ಟ ಗೇಟಿನಬಳಿ ನಡೆದಿದೆ.
ಹೆಬ್ಬಳಲು ಗ್ರಾಮದ ತಾತೇಗೌಡ ಮೃತ ದುರ್ದೈವಿಯಾದರೇ, ಮಗಳು ವೀಣಾ ಗಂಭೀರವಾಗಿ ಗಾಯಗೊಂಡಿದ್ದು, ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಧನ್ವಿತ್ ಗೌಡ, ಯತೀಶ್ ಗೌಡ ಮತ್ತು ರಚನಾ ಎಂಬ ಪುಟ್ಟ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಂದು ಬೆಳಗ್ಗೆ ನುಗ್ಗೇಹಳ್ಳಿ ಹೋಬಳಿಯ ಹೆಬ್ಬಳಲು ಗ್ರಾಮದಿಂದ ಮಗುವಿನ ಮುಡಿಕೊಡಲು ಒಂದೇ ಬೈಕಿನಲ್ಲಿ ಐದು ಮಂದಿ ಪ್ರಯಾಣ ಮಾಡುತ್ತಿದ್ದರು.
ಒಂದೇ ಬೈಕಿನಲ್ಲಿ ಐದು ಮಂದಿ ಪ್ರಯಾಣ ಮಾಡುವುದು ಬೇಡ ಆಟೋದಲ್ಲಿ ಹೋಗಿ ಎಂದು ಮನೆಯವರು ಮೊದಲೇ ಹೇಳಿದ್ರೂ ಕೇಳದ ತಾತೇಗೌಡ, ಇಬ್ಬರಿಗಾಗಿ ಆಟೋ ಮಾಡಬೇಕು, ನಮ್ಮ ಬೈಕ್ ಸಾಕು ಎಂದು ನಿರ್ಲಕ್ಷ್ಯದಿಂದ ದ್ವಿಚಕ್ರವಾಹನದಲ್ಲಿ ತನ್ನ ಮಗಳೊಂದಿಗೆ ಮೂರು ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣ ಮಾಡಿದ್ದಾರೆ.
ತನ್ನ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75 ಭೂಕನ ಬೆಟ್ಟ ದೇವಾಲಯಕ್ಕೆ ತೆರಳಲು ರಸ್ತೆ ದಾಟುವ ಮಧ್ಯೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಕಾರು ದೇವಸ್ಥಾನದ ರಸ್ತೆಗೆ ತಿರುಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನುಳಿದವರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಎಸಗಿದ ಕಾರು ಚಾಲಕ ಮತ್ತು ಕಾರನ್ನು ವಶಕ್ಕೆ ಪಡೆದಿದ್ದು, ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Corona ತಂದಿಟ್ಟ ಸಂಕಟ: ಆನೇಕಲ್ನಲ್ಲಿ ತಂದೆ, ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು