ಸಕಲೇಶಪುರ(ಹಾಸನ): ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಒಂದೆಡೆಯಾದರೆ ಬಡತನ ಇನ್ನೊಂದೆಡೆ. ಇಂತಹ ಸಂಕಷ್ಟಗಳನ್ನು ಮೆಟ್ಟಿ ನಿಂತ ಯುವಕನೊಬ್ಬ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ ಹಾಗೂ ಗ್ರಾಮೀಣ ಭಾಗಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.
ತಾಲೂಕಿನ ಹೆತ್ತೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಕೆ.ಕೆ.ದೀಪಕ್ ಕೊಣಬನಹಳ್ಳಿ ಗ್ರಾಮದವರು. ಪ್ರತಿನಿತ್ಯ 3 ಕಿಲೋ ಮೀಟರ್ ನಡೆದು ಕಾಲೇಜಿಗೆ ತೆರಳುತ್ತಿದ್ದರು. ಅನೇಕ ಅಡೆತಡೆಗಳ ನಡುವೆಯೂ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 565 (ಶೇ. 94.16) ಅಂಕ ಪಡೆದು ಸಾಧನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅರ್ಥಶಾಸ್ತ್ರ ವಿಭಾಗದಲ್ಲಿ 100ಕ್ಕೆ 99 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇನ್ನು ಕನ್ನಡದಲ್ಲಿ 96, ಇಂಗ್ಲಿಷ್ 87, ಇತಿಹಾಸ 97, ಅರ್ಥಶಾಸ್ತ್ರ 99, ವ್ಯವಹಾರ ಅಧ್ಯಯನ 92, ಲೆಕ್ಕಶಾಸ್ತ್ರದಲ್ಲಿ 94 ಅಂಕ ಪಡೆದಿದ್ದಾನೆ.
ದೀಪಕ್ ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾನೆ. ತಾಯಿ ಕೂಲಿ ಕೆಲಸ ಮಾಡಿಕೊಂಡು ತನ್ನ ಮೂವರು ಮಕ್ಕಳನ್ನು ಓದಿಸುತ್ತಿದ್ದಾರೆ. ಈತನ ಇಬ್ಬರು ಸಹೋದರರು ಕೂಡ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ತಾಯಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಹಣ ಹೊಂದಿಸಲು ಕಷ್ಟವಾಗುತ್ತಿತ್ತು. ಹೀಗಾಗಿ ರಜಾ ದಿನಗಳಲ್ಲಿ ದೀಪಕ್ ಕೂಲಿ ಕೆಲಸಕ್ಕೆ ಹೋಗಿ ಉಳಿದ ಅವಧಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸರ್ಕಾರಿ ಕಾಲೇಜಿನಲ್ಲಿ ಕಡು ಬಡುತನದ ನಡುವೆ ಈತ ಇಂತಹ ಸಾಧನೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ. ಆದರೆ ಮುಂದಿನ ವಿದ್ಯಾಭ್ಯಾಸ ಮಾಡಬೇಕಾದರೆ ಹಣದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ದೀಪಕ್ಗೆ ದಾನಿಗಳು ಸಹಾಯಹಸ್ತ ಚಾಚಬೇಕಿದೆ.
ಇನ್ನು ಈ ಕುರಿತು ಮಾತನಾಡಿದ ದೀಪಕ್, ನನ್ನ ಸಾಧನೆಗೆ ಬೆನ್ನುಲುಬಾಗಿ ನಿಂತ ಕಾಲೇಜಿನ ಉಪನ್ಯಾಸಕ ವರ್ಗಕ್ಕೆ ಹಾಗೂ ನನ್ನ ತಾಯಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬಿಕಾಂ ಮಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಕನಸಿದೆ ಎಂದು ಹೇಳಿದ್ದಾನೆ.