ಹಾಸನ/ಚನ್ನರಾಯಪಟ್ಟಣ: ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿ ಹಾಗೂ ಮಗುವಿಗೆ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಶ್ರೀವರಾಂಪುರ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶಿವಪುರ ಗ್ರಾಮದ ಆನಂದ್ ಮತ್ತು ಜ್ಯೋತಿ ದಂಪತಿಯ ಮಗಳಾದ ಸೌಂದರ್ಯ ಎಂಬುವರನ್ನು ತಾಲೂಕಿನ ಶ್ರೀವರಾಂಪುರ ಗ್ರಾಮದ ಗೋವಿಂದಯ್ಯ ಪುತ್ರ ರಂಗನಾಥನಿಗೆ ಸಂಪ್ರದಾಯಬದ್ಧವಾಗಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಂಗನಾಥ ಸೌಂದರ್ಯಳಿಗೆ ಊಟ - ನೀರು ಕೂಡ ನೀಡದೆ ಚಿತ್ರ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.
ಹುಟ್ಟಿದ ಮಗುವಿಗೂ ತಿನ್ನಲು ಅನ್ನ ಕೊಡದೆ ಹಸಿದ ಹೊಟ್ಟೆಯಲ್ಲೇ ಮಲಗಿಸುತ್ತಿದ್ದನಂತೆ. ಮಗು ಬೆಳಗ್ಗೆಯೇ ಎದ್ದು ಅಮ್ಮ ಹೊಟ್ಟೆ ಹಸಿವು ಎಂದಾಗಲೂ ಸುಮ್ಮನಿರುತ್ತಿದ್ದರು ಎಂದು ಆರೋಪಿಸಲಾಗಿದೆ. ಕೇವಲ ತಾಯಿಗೆ ಮಾತ್ರ ಹಿಂಸೆ ಕೊಟ್ಟಿದ್ದು ಸಾಲದೆಂದು ಮಗುವಿಗೂ ಬಾಸುಂಡೆ ಬರುವಂತೆ ಥಳಿಸಿದ್ದಾನೆ.
ಪತಿಯ ಚಿತ್ರಹಿಂಸೆ ತಾಳಲಾರದೆ ಪೊಲೀಸರ ಮೊರೆ ಹೋಗಿರುವ ಸೌಂದರ್ಯ, ಕೊಣನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ-ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಗನಾಥ್ ತಲೆಮರೆಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.