ಹಾಸನ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಕರ್ಪೂರ ದೇವತೆ ಸ್ವರ್ಣಗೌರಿ ದೇವಿಯು 9 ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡಲಿದ್ದು, ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ಭಕ್ತರು ಆಗಮಿಸಿ ಪೂಜಿಸುವುದು ವಿಶೇಷವಾಗಿದೆ.
ಸುಮಾರು 155 ವರ್ಷಗಳ ಇತಿಹಾಸ ಹೊಂದಿರುವ ಮಾಡಾಳು ಗ್ರಾಮದ ಸ್ವರ್ಣಗೌರಿ ದೇವಿಯು ಇಲ್ಲಿನ ಸ್ಥಳೀಯರ ಆರಾಧ್ಯ ದೇವತೆ. ನಂಬಿ ಬಂದವರ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬ ನಂಬಿಕೆಯಿಂದ ಭಕ್ತ ಸಮೂಹವೇ ಇಲ್ಲಿಗೆ ಹರಿದು ಬರುತ್ತದೆ. ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ದೇವರಲ್ಲಿ ಕರ್ಪೂರದ ಹರಕೆ ಹೊತ್ತರೆ ಸಾಕು ತಾಯಿ ಸಕಲವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಿದಾಗ ದೇವಿಗೆ ಮಡಲಕ್ಕಿ ರೂಪದಲ್ಲಿ ಅಕ್ಕಿ, ಸೀರೆ, ಬಳೆ ನೀಡಿ ದೇವಸ್ಥಾನದ ಮುಂದೆ ದುಗ್ಗಳವನ್ನು ಹೊತ್ತು ಕರ್ಪೂರ ಬೆಳಗಿಸುತ್ತಾರೆ.
ದೇವಿ ಪ್ರತಿಷ್ಠಾಪನೆಯ ಇತಿಹಾಸ:
ಹಾರನಹಳ್ಳಿ ಕೋಡಿಮಠದ ಶಿವಲಿಂಗಜ್ಜಯ್ಯನವರು ಹಾಗೂ ಮಾಡಾಳು ಗ್ರಾಮದ ಮುದ್ದೇಗೌಡರು ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮಕ್ಕೆ ಗೌರಮ್ಮ ಜಾತ್ರೆ ಮುಗಿಸಿ ವಾಪಸ್ ಬರುವಾಗ ಒಂದು ಹೆಣ್ಣಿನ ರೂಪದಲ್ಲಿ ಶ್ರೀ ದೇವಿಯು ನಾನು ಬರುತ್ತೇನೆ ಕರೆದುಕೊಂಡು ಹೋಗಿ ಎಂದು ಶ್ರೀಗಳಲ್ಲಿ ಹೇಳುವಂತಹ ಒಂದು ಅಶರೀರವಾಣಿ ಕೇಳಿತಂತೆ. ಆಗ ಶಿವಲಿಂಗಜ್ಜಯವರು ಗಂಗೆಯ ರೂಪದಲ್ಲಿ ಗೌರಮ್ಮನನ್ನು ತೆಗೆದುಕೊಂಡು ಬಂದರಂತೆ. ಹೀಗೆ ತೆಗದುಕೊಂಡು ಬಂದ ಗಂಗೆಯನ್ನು ಮುದ್ದೇಗೌಡರ ಮನೆಯ ಬಾವಿಯಲ್ಲಿ ಹಾಕಿ ಗೌರಮ್ಮ ದೇವಿಯಲ್ಲಿ ಶ್ರೀಗಳು ಇಲ್ಲೇ ನೆಲೆಸುವಂತೆ ಹೇಳುತ್ತಾ ಪ್ರತಿ ವರ್ಷ ಬರುವ ಗೌರಮ್ಮ ದೇವಿಯ ದಿನಕ್ಕೆ ಅರಿಶಿನದಿಂದ ಮಾಡುವ ವಿಗ್ರಹದ ರೂಪದಲ್ಲಿ ಬಂದು ಬರುವ ಭಕ್ತಾದಿಗಳಿಗೆ ಹರಸುವಂತೆ ಹೇಳುತ್ತಾರೆ. ಅಂದಿನಿಂದ ವಿಗ್ರಹ ರೂಪಕ್ಕೆ ಅಂದು ಶಿವಲಿಂಗಜ್ಜಯ್ಯನವರು ಒಂದು ದಾರದ ಅಳತೆಯನ್ನು ಆಚಾರರಿಗೆ ನೀಡಿ ಈ ಅಳತೆಗೆ ಗೌರಮ್ಮನವರನ್ನು ಮಾಡುವಂತೆ ಹೇಳುತ್ತಾರೆ. ತದ ನಂತರ ಗೌರಮ್ಮ ದೇವಿಯ ದಿನದಂದು ಶಿವಲಿಂಗಜ್ಜಯ್ಯನವರು ದೇವಿಗೆ ಒಂದು ವಜ್ರದ ಮೂಗುತಿಯನ್ನು ಹಾಕುತ್ತಾರೆ. ಅಂದಿನಿಂದ ಇಂದಿನವರೆಗೂ ಕೋಡಿಮಠದ ಶ್ರೀಗಳೇ ಮೊದಲ ಪೂಜೆ ಮಾಡುತ್ತಾ ಬರುತ್ತಿದ್ದು, ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಾರೆ. ದೇವಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನೆಲಸಿ ಬರುವ ಭಕ್ತರಿಗೆ ಬಹಳ ಆಕರ್ಷಣೀಯಯವಾಗಿ ಕಾಣುವುದು ವಿಶೇಷ.
ಕಣ್ಣೀರು ಸುರಿಸುವ ಗೌರಮ್ಮ:
9 ದಿನಗಳ ಕಾಲ ದೇವಿಯು ಭಕ್ತರಿಗೆ ದರ್ಶನ ನೀಡಿ ನಿಮಜ್ಜನ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ಮೂಗುತಿಯನ್ನು ತೆಗೆಯುವಾಗ ಕಣ್ಣಿನಲ್ಲಿ ನೀರು ಸುರಿಸಿ ಹೋಗುವುದು ಭಕ್ತರಿಗೆ ಆಶ್ಚರ್ಯದ ಸಂಗತಿಯಾಗಿದೆ.