ಹಾಸನ: ವೈರಸ್ ಹರಡದಂತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಕಾರ್ಮಿಕರು ಮತ್ತು ನೌಕರರ ಸುರಕ್ಷತೆ, ವಿಮೆ ಹಾಗೂ ಕೆಲಸದ ಭದ್ರತೆಗೆ ಹಾಗು ಹೊರ ರಾಜ್ಯದ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ಸರ್ಕಾರದ ಖರ್ಚಿನಲ್ಲೇ ಸುರಕ್ಷಿತವಾಗಿ ಕಳುಹಿಸಬೇಕು. ಈ ನಿಟ್ಟಿನಲ್ಲಿ ಅವರಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಮುನ್ಸಿಪಾಲಿಟಿ ಮತ್ತು ಗ್ರಾಮ ಪಂಚಾಯತಿ ನೌಕರರು ಮನೆ-ಮನೆಗಳ ಬಾಗಿಲಿಗೆ ಸಮೀಕ್ಷೆಗೆ ಹೋಗುತ್ತಾರೆ. ಇಂತವರು ಈ ಕಾಯಿಲೆಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚು. ಅವರ ಸುರಕ್ಷತೆಗೆ ಸಮಗ್ರವಾದ ಸುರಕ್ಷಿತ ಸಾಮಗ್ರಿಗಳೊಂದಿಗೆ ಮಾಸ್ಕ್ ಅಥವಾ ಸ್ಯಾನಿಟೈಸರ್‌ಗಳನ್ನು ಸರ್ಕಾರಗಳು ಒದಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ಹೊನ್ನಾಳಿ ತಾಲೂಕಿನ ಬಿದರನಳ್ಳಿ ಮಿನಿ ಅಂಗನವಾಡಿ ಕಾರ್ಯಕರ್ತೆಯ ತೀವ್ರವಾದ ದೈಹಿಕ ಹಲ್ಲೆ, ಶಿಡ್ಲಘಟ್ಟ ಕೋಟಳ್ಳಿ ಅಂಗನವಾಡಿ ಕಾರ್ಯಕರ್ತೆ ಮೇಲೆ ದೂರು ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ಈ ಘಟನೆಗಳು ನಡೆಯುತ್ತಲೇ ಇದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅರೆ ವೈದ್ಯಕೀಯ ಸಿಬ್ಬಂದಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಅಟೆಂಡರ್ಗಳು, ಆರೋಗ್ಯ ಸ್ವಯಂ ಸೇವಕರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಔಷಧ ವಿತರಕರು, 108 ಅಂಬುಲೆನ್ಸ್ ಚಾಲಕರು, ಸೆಕ್ಯೂರಿಟಿ ಗಾರ್ಡ್ಗಳು ಮತ್ತು ನೈರ್ಮಲ್ಯೀಕರಣ ಸಿಬ್ಬಂದಿ ಧೈರ್ಯವಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಸಾಂಕ್ರಾಮಿಕ ಕೊರೊನಾದಿಂದ ಅತ್ಯಮೂಲ್ಯವಾದ ಜೀವಗಳನ್ನು ಉಳಿಸುತ್ತಿದ್ದಾರೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಡಂಬರದ ಪ್ರದರ್ಶನಕ್ಕೆ 50 ಲಕ್ಷ ರೂ ವಿಮಾ ಪ್ಯಾಕೇಜ್ ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಎಂದು ಘೋಷಣೆ ಮಾಡಿತ್ತು. ಆದಾಗ್ಯೂ ಈ ವಿಮೆಯು ಕೊರೊನಾ ಚಿಕಿತ್ಸೆಗೆ ಅಥವಾ ಕ್ವಾರಂಟೈನ್ ವೆಚ್ಚ ಭರಿಸಲು ಅವಕಾಶವಿಲ್ಲ. ಚಪ್ಪಾಳೆ ಹೊಡೆಯುವುದರಿಂದ, ತಟ್ಟೆ ಬಡೆಯುವುದರಿಂದ ಹಾಗೂ ಹೂ ಸುರಿಸುವುದರಿಂದ ಸಾಂಕೇತಿಕವಾಗಿ ಗೌರವ ಸಲ್ಲಿಸುವುದು ಕೆಲವರನ್ನು ತೃಪ್ತಿ ಪಡಿಸಲು ತೋರಿಕೆಯ ಕಪಟ ಮೆಚ್ಚುಗೆಯಾಗಿದೆ ಎಂದು ದೂರಿದರು.