ಹಾಸನ: ವಿದೇಶದಲ್ಲಿ ಭಾರತದ ಬಾವುಟ ಹಾರಿಸಬೇಕಿದ್ದ ಹಿರಿಯ ಕ್ರೀಡಾಪಟು ಕೋವಿಡ್-19 ನಿಂದಾಗಿ ಬೀದಿಯಲ್ಲಿ ನಿಂತು ಮಾಸ್ಕ್ ಮಾರಾಟ ಮಾಡುವಂತಾಗಿದೆ.
ನಗರದ ನಿವಾಸಿ ಅನಿಲ್‌ಕುಮಾರ್(57) ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ ಕೀರ್ತಿ ತಂದಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ 5 ಕಿ.ಮೀ. ನಡಿಗೆ, 5 ಕಿ.ಮೀ. ಓಟದ ಸ್ಪರ್ಧೆ ಹಾಗೂ ಏಪ್ರಿಲ್‌ನಲ್ಲಿ ಜಪಾನ್‌ನಲ್ಲಿ ನಿಗದಿಯಾಗಿದ್ದ ಪಂದ್ಯಾವಳಿಯಲ್ಲಿ ಅನಿಲ್ ಕುಮಾರ್ ಭಾರತ ಪ್ರತಿನಿಧಿಸಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್ ಅವರ ಗುರಿ ಮೊಟಕುಗೊಳಿಸಿರುವುದು ಮಾತ್ರವಲ್ಲದೇ ಅವರ ಜೀವನಕ್ಕೂ ಹೊಡೆತ ನೀಡಿದೆ.
ಹಾಸನ ನಗರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಿರುವ ಅನಿಲ್‌ಕುಮಾರ್ ಅವಿವಾಹಿತರು. ಆರಂಭದಿಂದಲೂ ಕ್ರೀಡೆ, ಸಾಮಾಜಿಕ ಚಟುವಟಿಕೆಗಳಲ್ಲೇ ಗುರುತಿಸಿಕೊಂಡಿರುವ ಅವರು ಜೀವನೋಪಾಯಕ್ಕಾಗಿ ಫೋಟೊಗ್ರಾಫರ್ ವೃತ್ತಿ ನೆಚ್ಚಿಕೊಂಡಿದ್ದಾರೆ. ದುಡಿಮೆಯಿಂದ ಬರುವ ಅಲ್ಪ ಸ್ವಲ್ಪ ಆದಾಯದಲ್ಲೇ ಕ್ರೀಡಾಕೂಟದ ಖರ್ಚು ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ, ಆರು ತಿಂಗಳಿಂದ ಸಭೆ, ಸಮಾರಂಭಗಳ ಪ್ರಮಾಣ ಕಡಿಮೆಯಾಗಿದ್ದು, ಆ ಕೆಲಸವೂ ಕೈ ಕೊಟ್ಟಂತಾಗಿದೆ.
ಜೀವನ ಸಾಗಿಸಲು ಮೂರು ಹೊತ್ತಿನ ಊಟಕ್ಕಾಗಿ ಅನಿಲ್ ಕುಮಾರ್ ಪರದಾಡುತ್ತಿದ್ದಾರೆ. ಸದ್ಯ ವಿಧಿಯಿಲ್ಲದೇ ಬೀದಿ ಬದಿಯಲ್ಲಿ ಮಾಸ್ಕ್ ಮಾರಾಟಕ್ಕೆ ನಿಂತಿರುವ ಅವರಿಗೆ ದಿನಕ್ಕೆ 50 ರೂಪಾಯಿ ಲಾಭವಾದರೆ ಪುಣ್ಯ ಎಂಬಂತಾಗಿದೆ.
ಹಿರಿಯ ಕ್ರೀಡಾಪಟುವಿಗೆ ಯಾರಾದರೂ ಸಹಾಯ ಮಾಡುವವರಿದ್ದರೆ 9611966084 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು.