ಹಾಸನ: ಕ್ಷುಲ್ಲಕ ಕಾರಣಕ್ಕೆ ಗಂಡನೇ ಹೆಂಡತಿಯನ್ನು ಕೊಲೆಗೈದಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಶಾಂತಿಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಂಡ ತನ್ನ ಮಡದಿ ಅನ್ನಪೂರ್ಣ(30)ಳನ್ನ ಕೊಲೆ ಮಾಡಿದ್ದಾನೆ. ಕೊಲೆಗೆ ಕೌಟುಂಬಿಕ ಸಮಸ್ಯೆಯೇ ಕಾರಣ ಎಂಬ ಮಾತು ಕೇಳಿ ಬಂದಿದ್ದು, ಬಳಿಕ ತಾನೂ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡವನನ್ನು ತುಳಸಿದಾಸ್ (40) ಎಂದು ಗುರುತಿಸಲಾಗಿದೆ. ಈತ ಹಾಸನದ ಎಟಿಎಂ ಒಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಇಂದು ಮಧ್ಯಾಹ್ನ ತುಳಿಸಿದಾಸ್ ತನ್ನ ಪತ್ನಿಯನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಇಬ್ಬರಿಗೂ ಸ್ವಲ್ಪ ಹೊತ್ತು ಜಗಳವಾಗಿದೆ. ಬಳಿಕ ಆತ ಆಕೆಯನ್ನ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಓದಿ: ಬಿಟ್ ಕಾಯಿನ್ ಎಟಿಎಂ ಸ್ಥಾಪಿಸಿದವರ ವಿರುದ್ಧದ ಕ್ರಿಮಿನಲ್ ಕೇಸ್ ಹೈಕೋರ್ಟ್ನಿಂದ ರದ್ದು
ಮೂರು ತಿಂಗಳ ಹಿಂದೆ ಮೈಸೂರು ಮೂಲದ ಅನ್ನಪೂರ್ಣಳನ್ನ ಮದುವೆಯಾಗಿದ್ದ ತುಳಸಿದಾಸ, 1 ಒಂದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಈತನ ಸಂಸಾರದಲ್ಲಿ 15 ದಿನಗಳಿಂದ ವಿರಸ ಮೂಡಿತ್ತು. ವಾರದಿಂದ ಮನೆಯಲ್ಲಿಯೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.