ಹಾಸನ: ಮಲೆನಾಡು ಭಾಗಗಳಲ್ಲಿ ಮತ್ತು ಶೀತ ಪ್ರದೇಶಗಳಲ್ಲಿ ಬೆಳೆಯುವಂಥ ಸಾಂಬಾರು ಪದಾರ್ಥಗಳನ್ನು ಬಯಲು ಸೀಮೆಯಲ್ಲಿ ಬೆಳೆಯುವ ಮೂಲಕ ಬರದ ನಾಡಿನ ರೈತನೋರ್ವ ಮಾದರಿಯಾಗಿದ್ದಾರೆ.
ಹೌದು, ಹಾಸನ ಜಿಲ್ಲೆಯ ಬರಪೀಡಿತ ಪ್ರದೇಶ ಎಂದೇ ಗುರುತಿಸಲ್ಪಟ್ಟಿರುವ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದ ರೈತ ಸಿದ್ದೇಶ್. ಇವರಿಗೆ ಕೃಷಿ ಎಂದರೆ ಬಲು ಇಷ್ಟ. ಯಾವುದೇ ಕೆಲಸವನ್ನಾದರೂ ಕೂಡ ಬಹಳ ನಿಷ್ಠೆಯಿಂದ ಮಾಡುವ ಅಭ್ಯಾಸ ಇವರದ್ದು. ತಮಗಿರುವ 8 ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅಡಿಕೆ ಜೋಳ, ರಾಗಿ, ಶುಂಠಿ, ಮಾವು, ಹಲಸು ಮತ್ತು ಸೀಬೆ ಮುಂತಾದ ಬೆಳೆಗಳನ್ನು 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದು, ಇನ್ನುಳಿದ 2 ಎಕರೆ ಪ್ರದೇಶದಲ್ಲಿ ಮಲೆನಾಡು ಭಾಗಗಳಲ್ಲಿ ಬೆಳೆಯುವ ಏಲಕ್ಕಿ ಹಾಗೂ ಮೆಣಸನ್ನು ಬೆಳೆಯುವ ಮೂಲಕ ಮಾದರಿ ರೈತ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಚಿಕ್ಕಮಗಳೂರಿಗೆ ಹೋದ ಸಂದರ್ಭದಲ್ಲಿ ಅಲ್ಲಿಂದ ಏಲಕ್ಕಿ ಗಿಡಗಳನ್ನು ತಂದು ತಮ್ಮ 2 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದ್ದರು. ಅದಕ್ಕೆ ಬೇಕಾಗುವ ಪೌಷ್ಟಿಕ ಕೆರೆ ಮಣ್ಣಿನ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಬಳಸಿ ಏಲಕ್ಕಿಯನ್ನು ಬೆಳೆದಿದ್ದಾರೆ. ಹನಿ ನೀರಾವರಿಯ ಮೂಲಕ ಮಲೆನಾಡು ಭಾಗದ ರೀತಿಯಲ್ಲಿಯೇ ಕೃಷಿ ಮಾಡಿದ್ದು, ಈಗ ಅದು ಫಸಲಿಗೆ ಬಂದಿದೆ. ಮಲೆನಾಡು ಭಾಗದಲ್ಲಿ ಗಿಡಗಳನ್ನು ತರುವ ಸಂದರ್ಭದಲ್ಲಿ ಪೋಷಣೆ ಮಾಡುವ ವಿಧಾನಗಳನ್ನು ತಿಳಿದುಕೊಂಡು ಬಂದಿದ್ದ ಇವರು, ಅವರು ಹೇಳಿದ ಮಾರ್ಗದಲ್ಲಿ ಸ್ವತಃ ತಾವೇ ನಿರ್ವಹಣೆ ಮಾಡಿ ಬರದ ನಾಡಲ್ಲಿ ಕೂಡ ಸಾಂಬಾರು ಬೆಳೆಯನ್ನು ಬೆಳೆಯಬಹುದು ಎಂಬುದನ್ನು ಈ ಭಾಗದ ರೈತರಿಗೆ ತೋರಿಸಿಕೊಟ್ಟಿದ್ದಾರೆ.
ಇಷ್ಟೇ ಅಲ್ಲದೇ ಇವರ ಕುಟುಂಬದ ಸದಸ್ಯರು ಮೊದಲಿಗೆ ಸಿದ್ದೇಶ್ ಅವರನ್ನು ಬೈದುಕೊಂಡಿದ್ದು ಕೂಡ ಅಷ್ಟೇ ಸತ್ಯ. ನೀರಾವರಿ ಪ್ರದೇಶಗಳಲ್ಲಿ ಅಥವಾ ಮಲೆನಾಡು ಪ್ರದೇಶಗಳಲ್ಲಿ ಬೆಳೆಯುವಂಥ ಬೆಳೆಗಳು ಬಯಲು ಸೀಮೆಯಲ್ಲಿ ಬೆಳೆಯಲು ಸಾಧ್ಯವಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಿ ಗಿಡಗಳನ್ನು ತಂದು ಕೃಷಿ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ ಎಂಬ ಆತಂಕ ಇತ್ತು. ಆದರೆ ಏಲಕ್ಕಿ ಬೆಳೆಗೆ ಹನಿ ನೀರಾವರಿ ಮೂಲಕ ನೀರುಣಿಸಿ ಕೃಷಿ ಮಾಡಿದ ಹಿನ್ನೆಲೆಯಲ್ಲಿ ಈಗ ಬೆಳೆ ತುಂಬಾ ಚೆನ್ನಾಗಿ ಬಂದಿದೆ.
ನನ್ನ ಪತಿ ಮಾಡಿರುವ ಈ ಕೃಷಿಯನ್ನು ಈಗ ಈ ಭಾಗದ ಸುತ್ತಮುತ್ತಲಿನ ರೈತರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಏಲಕ್ಕಿ ಕೃಷಿ ಮಾಡುವ ವಿಧಾನವನ್ನು ಕೂಡ ನನ್ನ ಪತಿಯವರು ಇತರರಿಗೆ ಹೇಳಿಕೊಡುವ ಮೂಲಕ ಇದರ ಬಗೆಗಿನ ಕೃಷಿ ವಿಧಾನವನ್ನು ತಿಳಿಸಿ ಕೊಡುತ್ತಿದ್ದಾರೆ. ನಮಗೆ ಬಹಳ ಸಂತೋಷವಾಗುತ್ತದೆ. ನಮಗೂ ಕೂಡ ಏಲಕ್ಕಿ ಬೆಳೆಯುವ ವಿಧಾನ ಗೊತ್ತಿರಲಿಲ್ಲ. ಆದರೆ ಈಗ ಅದರ ಬಗ್ಗೆ ಸಂಪೂರ್ಣ ಅರಿವಿದ್ದು, ನಾವು ಸಹ ಈ ಕೃಷಿಯಲ್ಲಿ ಪಾಲ್ಗೊಂಡಿದ್ದೇವೆ ಎನ್ನುತ್ತಾರೆ ಸಿದ್ದೇಶ್ ಪತ್ನಿ ಪದ್ಮಾ.
ಒಟ್ಟಾರೆ ಕಷ್ಟ ಬಂದರೂ ಧೃತಿಗೆಡದೆ ಕೆಲವು ಬೆಳೆಗಳಿಗೆ ಅನುಸರಿಸಬೇಕಾದ ಕ್ರಮಗಳನ್ನು ಕೆಲವು ನುರಿತ ಕೃಷಿಕರಿಂದ ತಿಳಿದುಕೊಂಡರೆ ಎಂತಹ ಭೂಮಿಯೇ ಆದರೂ ಏನನ್ನಾದರೂ ಬೆಳೆಯಬಹುದು ಎಂಬುದಕ್ಕೆ ಅರಸೀಕೆರೆ ತಾಲೂಕಿನ ಸಿದ್ದೇಶ್ ಸ್ಪಷ್ಟ ಉದಾಹರಣೆ.