ಹಾಸನ: ತಾಂತ್ರಿಕ ದೋಷದಿಂದ ಕಾರೊಂದು ಹೊತ್ತಿ ಉರಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಗಡಿಭಾಗದಲ್ಲಿ ನಡೆದಿದೆ.
ಹಾಸನ ಮತ್ತು ಮಂಗಳೂರು ಗಡಿಭಾಗದ ಮಾರನಹಳ್ಳಿ ಮತ್ತು ಹೆಗ್ಗದ್ದೆ ನಡುವಿನ ರಸ್ತೆ ಬದಿಯಲ್ಲಿ ಇಂತಹದೊಂದು ಘಟನೆ ಸಂಭವಿಸಿದ್ದು, ಸದ್ಯದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನದಿಂದ ಮಂಗಳೂರಿಗೆ ತೆರಳುತ್ತಿದ್ದ ಹಾಸನದ ಹೇಮಾವತಿ ನಗರದ ಮನು ಮತ್ತು ಸ್ನೇಹಿತರು ಫೋರ್ಡ್ ಕಂಪನಿಯ ಐಕಾನ್ ಕಾರ್ ನಲ್ಲಿ ತೆರಳುತ್ತಿದ್ದರು. ಕಳೆದ ಐದಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾರು ಚಲಾಯಿಸಲು ತೊಂದರೆಯಾಗಿದ್ದು, ಕಾರಿನ ವೈಫರ್ ಹಾಕಿ, ಬಳಿಕ ಕಾರಿನ ಎಸಿ ಆನ್ ಮಾಡಿದ್ದಾರೆ.
ಬಳಿಕ ಹವಾನಿಯಂತ್ರಣ ಪೆಟ್ಟಿಗೆಯಿಂದ ಸುಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ, ಕಾರಿನಿಂದ ಇಳಿದು ಕಾರಿನ ಮುಂಭಾಗದ ಬಾನೆಟ್ ತೆಗೆದ ಹಿನ್ನೆಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಕಾರು ಸುಟ್ಟು ಕರಕಲಾಗಿದೆ.
ಇನ್ನು ಕಾರು ಹೊತ್ತಿ ಹೊಡೆದಿದ್ದರಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಕ್ರಮವಹಿಸಿದ್ದರು. ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿಯನ್ನು ನಂದಿಸುವಷ್ಟರಲ್ಲಿ ಮಳೆಯೇ ಹೊತ್ತಿ ಉರಿಯುತ್ತಿದ್ದ ಬೆಂಕಿಯ ಕೆನ್ನಾಲಿಗೆಯನ್ನ ತಣ್ಣಗಾಗಿಸಿತ್ತು.
ಇನ್ನು ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.