ಹಾಸನ: ಜೀವನದಲ್ಲಿ ಜಿಗುಪ್ಸೆಗೊಂಡು ಬ್ಯಾಂಕ್ ಮ್ಯಾನೇಜರ್‌ನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ರವೀಂದ್ರನಾಥ್ ಎಚ್ ಎಸ್ (45) ಆತ್ಮಹತ್ಯೆಗೆ ಶರಣಾಗಿರುವ ಖಾಸಗಿ ಬ್ಯಾಂಕ್ ಮ್ಯಾನೇಜರ್. ರವೀಂದ್ರನಾಥ ಮೂಲ ಚಿಕ್ಕಮಗಳೂರು ಜಿಲ್ಲೆ. ಆತ್ಮಹತ್ಯೆಗೆ ಯಾವುದೇ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಆತ್ಮಹತ್ಯೆಗೆ ಶರಣಾಗುವ ಮುನ್ನ ಮರಣ ಪತ್ರವನ್ನು ರವೀಂದ್ರನಾಥ್ ಬರೆದಿದ್ದು, ಜೀವನದಲ್ಲಿ ನಾನು ಜಿಗುಪ್ಸೆ ಹೊಂದಿದ್ದೇನೆ, ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ ಅಂತಾ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ.
ಮೃತ ರವೀಂದ್ರನಾಥ ಚನ್ನರಾಯಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ಪಟ್ಟಣದ ಬ್ರಾಹ್ಮಣ ವಿದ್ಯಾರ್ಥಿನಿಲಯದ ಹಿಂಭಾಗದಲ್ಲಿರುವ ಕಲ್ಯಾಣನಗರ ಜ್ಯೋತಿ ನಗರ ಅಂಚೆ ವಿಳಾಸದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.