ಹಾಸನ : ಆಗಸ್ಟ್ 9 ರಂದು ನಡೆದಿದ್ದ ಗ್ರಾನೈಟ್ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಇದೀಗ 7 ಜನ ಸುಪಾರಿ ಕಿಲ್ಲರ್ಗಳನ್ನು ಹೆಡಮುರಿ ಕಟ್ಟಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, "ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ನಾವು ಕೊಲೆಗೆ ಸಹಾಯ ಮಾಡಿದ ಆರು ಮಂದಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದೆವು. ಕೊಲೆ ಮಾಡಲು ಸುಮಾರು ಏಳು ಮಂದಿ ಸುಪಾರಿ ಪಡೆದಿದ್ದರು ಎಂದು ತಿಳಿದು ಬಂದಿತ್ತು. ಇದೀಗ ಅವರನ್ನು ನಮ್ಮ ತಂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸುಪಾರಿ ಕೊಟ್ಟ ಯೋಗಾನಂದ ಮತ್ತು ಆತನ ಇನ್ನಿಬ್ಬರು ಸಂಬಂಧಿಕರುಗಳನ್ನು ಶೀಘ್ರದಲ್ಲೇ ಅರೆಸ್ಟ್ ಮಾಡುವ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡುತ್ತೇವೆ" ಎಂದರು.
ಹಣದ ವಿಚಾರವಾಗಿ ನಡೆದ ಈ ಕೊಲೆ ಪ್ರಕರಣದಲ್ಲಿ ಸುಮಾರು 16 ಮಂದಿ ಭಾಗಿಯಾಗಿದ್ದು, ಈಗಾಗಲೇ ನಾವು 13 ಮಂದಿಯನ್ನು ಬಂಧಿಸಿದ್ದೇವೆ. ಅದರಲ್ಲಿ ಸುಪಾರಿ ಪಡೆದ ಏಳು ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರನ್ನು ಹಾಸನ ಗುಡ್ಡನಹಳ್ಳಿಯ ಚಂದನ್, ಚನ್ನರಾಯಪಟ್ಟಣ ತಾಲೂಕು ಗುಡ್ಡೇನಹಳ್ಳಿಯ ಚೇತನ್, ಬೆಂಗಳೂರಿನ ನಾಗಶೆಟ್ಟಿ ಹಳ್ಳಿಯ ಪ್ರದೀಪ್, ಚನ್ನರಾಯಪಟ್ಟಣದ ಬಾಗೂರು ರಸ್ತೆಯ ಮಣಿಕಂಠ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬ್ಯಾಡರಹಳ್ಳಿ ಗ್ರಾಮದ ಮಧುಸೂದನ, ಮೈಸೂರು ಜಿಲ್ಲೆ, ಬೊಮ್ಮೇನಹಳ್ಳಿ ಗ್ರಾಮದ ಧನಂಜಯ ಹಾಗೂ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.
ಕೃಷ್ಣೇಗೌಡ ಕೊಲೆಯು ಹಣದ ವಿಚಾರವಾಗಿ ನಡೆದಿದ್ದು, ಗ್ರಾನೈಟ್ ಉದ್ಯಮಿ ಮತ್ತು ಯೋಗಾನಂದ ನಡುವೆ ಮಾತಿನ ಚಕಮಕಿ ಕೂಡಾ ನಡೆದಿದೆ. ಈ ವೇಳೆ ಕೃಷ್ಣೇಗೌಡರು ಯೋಗಾನಂದನ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಬಳಿಕ ಸುಪಾರಿ ನೀಡಿದ ಯೋಗಾನಂದ ಸುಮಾರು ಆರು ತಿಂಗಳ ಹಿಂದೆ ಕೊಲೆ ಮಾಡುವ ಉದ್ದೇಶದಿಂದ ಯೋಜನೆ ರೂಪಿಸಿ ಗ್ರಾನೈಟ್ ಫ್ಯಾಕ್ಟರಿಗೆ ಹೋಗಿದ್ದ. ಈ ವೇಳೆ ಕೊಲೆ ಮಾಡಿಸಿ ತಲೆ ಮರೆಸಿಕೊಂಡಿದ್ದಾನೆ.
ಇದನ್ನೂ ಓದಿ : Hassan murder case : ಜೆಡಿಎಸ್ ಮುಖಂಡ ಕೃಷ್ಣೇಗೌಡ್ರ ಹತ್ಯೆ ಪ್ರಕರಣ.. 6 ಆರೋಪಿಗಳ ಬಂಧನ, ಉಳಿದವರಿಗಾಗಿ ತೀವ್ರ ಶೋಧಕಾರ್ಯ
ಪ್ರಕರಣದ ಹಿನ್ನೆಲೆ: ಕೃಷ್ಣೇಗೌಡರನ್ನು ಆರೋಪಿ ಸುರೇಶ್ ಎಂಬಾತ ಯೋಗಾನಂದ ಹೊನ್ನೇನಹಳ್ಳಿಗೆ ಪರಿಚಯ ಮಾಡಿಕೊಟ್ಟಿದ್ದು, ಪರಿಚಯ ಸ್ನೇಹವಾಗಿ ತಿರುಗಿತ್ತು. ನಂತರ ಕೃಷ್ಣೇಗೌಡರ ಯಾವುದೋ ಒಂದು ಪ್ರಕರಣವನ್ನ ಪ್ರಮುಖ ಆರೋಪಿ ಬಗೆಹರಿಸಿಕೊಟ್ಟಿದ್ದ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಯೋಗಾನಂದ್, ಹೊನ್ನೇನಹಳ್ಳಿ ಸ್ಥಳೀಯ ಚಾನಲ್ ಹಾಗೂ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿಸುತ್ತಾನೆ. ಕೋಟಿ ಕೋಟಿ ಬಂಡವಾಳವಾಗಿ ಹೂಡಿಕೆ ಮಾಡಿಸಿಕೊಂಡ ಬಳಿಕ ಮೋಸ ಮಾಡಿದ್ದಾನೆಂದು ಕೃಷ್ಣೇಗೌಡರಿಗೆ ಗೊತ್ತಾಗುತ್ತಿದ್ದಂತೆ ಯೋಗಾನಂದ್ ಜೊತೆ ಜಗಳ ಮಾಡಿಕೊಂಡಿದ್ದರು. ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದರು. ಯೋಗಾನಂದ ಹಣ ಹಿಂದಿರುಗಿಸಲು ನಿರಾಕರಿಸಿದ ಹಿನ್ನೆಲೆ ಕೃಷ್ಣೇಗೌಡ, 2022ರ ನವೆಂಬರ್ನಲ್ಲಿ ಆತನನ್ನೇ ಅಪಹರಿಸಿ ಸುಮಾರು 9 ದಿನಗಳ ಕಾಲ ಗೌಪ್ಯ ಸ್ಥಳದಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ಯೋಗಾನಂದ ದೂರು ಕೂಡ ನೀಡಿದ್ದ. ಯೋಗಾನಂದ ವಿರುದ್ಧ ವಂಚನೆ ಆರೋಪದಲ್ಲಿ ಕೃಷ್ಣೇಗೌಡ ಕೂಡ ಪ್ರತಿದೂರು ನೀಡಿದ್ದರು. ಅನಂತರ ಆರೋಪಿ ಯೋಗಾನಂದ, ಕೃಷ್ಣೇಗೌಡನನ್ನು ಕೊಲೆ ಮಾಡಿಸಿ, ತಲೆ ಮರೆಸಿಕೊಂಡಿದ್ದಾನೆ.