ಹಾಸನ : ಭೂಗರ್ಭದಲ್ಲಿ ಹುದುಗಿದ್ದ ಪ್ರಾಚೀನ ಕಾಲದ 5 ಜಿನಮೂರ್ತಿಗಳನ್ನು ಜೈನಮುನಿ ವೀರಸಾಗರ ಮಹಾರಾಜರ ಸಾನಿಧ್ಯದಲ್ಲಿ ಉತ್ಖನನ ಮಾಡಿ ಹೊರ ತೆಗೆಯಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಅಡಗೂರಿನಲ್ಲಿ ಸುಮಾರು 5 ಪ್ರಾಚೀನ ಜೈನ ಶೀಲಾ ಮೂರ್ತಿಗಳು ದೊರೆತಿವೆ.
ಉತ್ಖನನ ಸಂದರ್ಭದಲ್ಲಿ ಎರಡು ಅಡಿ ಎತ್ತರದ ಮುನಿಸುವೃತ ತೀರ್ಥಂಕರ, 1.5 ಅಡಿ ಎತ್ತರದ ಆದಿನಾಥ ತೀರ್ಥಂಕರ, ಒಂದು ಅಡಿಯ ಪಾರ್ಶ್ವನಾಥ ತೀರ್ಥಂಕರ ಹಾಗೂ ಜೈನ ಯಕ್ಷಿಯ ಕಲ್ಲಿನ ವಿಗ್ರಹಗಳು ದೊರೆತಿವೆ. ಇದರೊಂದಿಗೆ ಮೂರು ಇಂಚಿನ ಪುಟ್ಟದಾದ ಪದ್ಮಾವತಿ ಮಾತೆಯ ಮೂರ್ತಿ ದೊರಕಿರುವುದು ವಿಶೇಷ.
![5 jina Idols of ancient](https://etvbharatimages.akamaized.net/etvbharat/prod-images/kn-hsn-04-jina-murthy-avb-7203289-hd_14032021194228_1403f_1615731148_361.jpg)
ಅಡಗೂರಿನ ಜಮೀನು ಸಮತಟ್ಟು ಮಾಡುವ ಸಲುವಾಗಿ ಕೆಲ ದಿನದ ಹಿಂದೆ ಜೆಸಿಬಿಯಿಂದ ಮಣ್ಣಿನ ಮೇಲ್ಪದರ ತೆಗೆದಾಗ ಜಿನಮೂರ್ತಿಯ ತಲೆಯ ಭಾಗ ಹೊರಬಂದು ಓಡಾಡುವಾಗ ಕಣ್ಣಿಗೆ ಬಿದ್ದಿತ್ತು. ವಿಗ್ರಹದ ಸುತ್ತ ಮಣ್ಣನ್ನು ಬಿಡಿಸಿ ನೋಡಿದಾಗ ಭೂಮಿಯಲ್ಲಿರುವುದು ಜಿನಮೂರ್ತಿ ಎಂಬುದು ಖಚಿತವಾಯಿತು.
ಓದಿ: ತಲೆ ಬೋಳಿಸಿಕೊಂಡು ಅಸಮಾಧಾನ ಪ್ರದರ್ಶಿಸಿದ ಕೇರಳ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ!
ಆದಿನಾಥ ತೀರ್ಥಂಕರರ ಮೊಕ್ಷ ಕಲ್ಯಾಣದ ದಿನ ಬ್ರಾಹ್ಮಿ ಮೂಹೂರ್ತದಲ್ಲಿ ಮೂರ್ತಿಯನ್ನು ಹೊರ ತೆಗೆಬೇಕೆಂದು ತೀರ್ಮಾನ ಕೈಗೊಂಡು ವಿಧಿ-ವಿಧಾನದೊಂದಿಗೆ ಇಂದು ಉತ್ಖನನ ಪ್ರಕ್ರಿಯೆ ನಡೆಸಲಾಗಿದೆ. ಮತ್ತಷ್ಟು ಮೂರ್ತಿಗಳು ಜೈನರ ಗುತ್ತಿಯಲ್ಲಿ ದೊರಕಲಿದ್ದು, ಜೈನರ ಗುತ್ತಿ ದೊಡ್ಡ ಕ್ಷೇತ್ರವಾಗಿ ಹೊರಹೊಮ್ಮಲಿದೆ.
ಭೂಮಿಯಿಂದ ಹೊರತೆಗೆದ ಪ್ರಾಚೀನ ಮೂರ್ತಿಗಳಿಗೆ 27 ಕಳಸದಿಂದ ಜಲಾಭಿಷೇಕ. ವಿವಿಧ ದ್ರವ್ಯಗಳಿಂದ ಅಭಿಷೇಕದ ಮತ್ತು ಮಹಾಶಾಂತಿ ಧಾರೆ ನೆರವೇರಿಸಲಾಯಿತು. ವಿಧಾನಚಾರ್ಯ ಪ್ರವೀಣ್ ಪಂಡಿತ್, ಪುರೋಹಿತರಾದ ನಾಗರಾಜು, ಬಾಲರಾಜು, ಶೀತಲ್ ಪ್ರಸಾದ್ ಪೂಜಾ ವಿಧಾನ ನಡೆಸಿದರು.