ಹಾಸನ: ಕೊರೊನಾ ವೈರಸ್‌ಗೆ ಬಲಿ ಆಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಸನದಲ್ಲೂ ಕೋವಿಡ್ಗೆ 26 ವರ್ಷದ ಯುವತಿ ಬಲಿಯಾಗಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಚೌಡನಹಳ್ಳಿಯ 26 ವರ್ಷದ ಯುವತಿ ಕೋವಿಡ್ಗೆ ಬಲಿಯಾದವಳು. ಬೆಂಗಳೂರಿನಿಂದ ಬಂದಿದ್ದ ಯುವತಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಜ್ವರದ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಮಾಡಿಸಿದಾಗ ಯುವತಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸೋಂಕು ತಗುಲಿದ್ದ ಕಾರಣ ಆಕೆಯನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೂರು ದಿನ ಐಸಿಯುನಲ್ಲಿದ್ದ, ಆಕೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.
ಯುವತಿ ಸಾವಿನ ಹಿನ್ನೆಲೆ ಇಡೀ ಗ್ರಾಮದಲ್ಲಿ ಈಗ ಕೋವಿಡ್ ಆತಂಕ ಹೆಚ್ಚಾಗಿದೆ. ಯುವತಿ ಮನೆಯವರು ಸೇರಿ ಇಡೀ ಗ್ರಾಮದ ಜನರಿಗೆ ಕೋವಿಡ್ ಪರೀಕ್ಷೆ ಮಾಡಲು ತಯಾರಿ ನಡೆಸಲಾಗಿದೆ. ವೈದ್ಯರು ಇಂದು ಗ್ರಾಮದ 70 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 8 ರಿಂದ 9 ಜನ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಬುಧವಾರ ಒಟ್ಟು 30 ಸಾವಿರ ಗಡಿ ದಾಟಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಗಂಟೆಗೆ ಇಬ್ಬರಿಂದ ಮೂವರು ಸೋಂಕಿತರು ಮೃತಪಡುತ್ತಿದ್ದಾರೆ. ಸದ್ಯ ಈಗ ಬೆಂಗಳೂರಿನ ಸ್ಥಿತಿ ನೋಡಿದ್ರೆ ಆತಂಕಕ್ಕೆ ನೂಕಿದೆ.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಈಗ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಕಡೆ ಮುಖ ಮಾಡುತ್ತಿದ್ದು, ಚನ್ನರಾಯಪಟ್ಟಣ ತಾಲೂಕಿನಲ್ಲಿ ನಮಗೆ ಹಾಸಿಗೆ ನೀಡಿ ಎಂದು ಶಾಸಕರ ಬಳಿ ಈಗ ಬೇಡಿಕೆಯಿಟ್ಟಿದ್ದಾರಂತೆ. ಈ ಬಾರಿ ಮುಂಬೈಯಿಂದ ಬರುವ ಪ್ರಯಾಣಿಕರಿಗಿಂತ ಬೆಂಗಳೂರಿನ ಕಡೆಯಿಂದ ಬರುವ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತನೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸರ್ಕಾರವೂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ರಕ್ಷಣೆಗೆ ಹೆಚ್ಚು ಹಣ ಬಿಡುಗಡೆ ಮಾಡುವ ಮೂಲಕ ಸಾರ್ವಜನಿಕರ ಹಿತ ಕಾಯಬೇಕು ಎಂದು ಶ್ರವಣಬೆಳಗೊಳ ಶಾಸಕ ಸಿ. ಎನ್. ಬಾಲಕೃಷ್ಣ ಮನವಿ ಮಾಡಿದರು.