ಅರಕಲಗೂಡು : ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಅಭಿವೃದ್ಧಿ ಕಾಮಗಾರಿ ಸಂಬಂಧ ಹಾಸನ ಜಿಲ್ಲೆಗೆ 200 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ತಾಲೂಕಿನ ಮಲ್ಲಿಪಟ್ಟಣ ಹೋಬಳಿ ವಿಜಾಪುರ ಅರಣ್ಯ ಗ್ರಾಮದಿಂದ ಕೋನಾಪುರ ಗ್ರಾಮದವರೆಗೂ 2.98 ಕೋಟಿ ರೂ. ವೆಚ್ಚದ 3 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮೊದಲ ಹಂತದಲ್ಲಿ ಜಿಲ್ಲೆಯಾದ್ಯಂತ 50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಎರಡು ಹಂತಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು. ಪ್ರತಿ ಗ್ರಾಮ ಪಂಚಾಯತ್ ಹಂತದಲ್ಲಿ ಸಭೆ ನಡೆಸಿ ಜನರ ಕುಂದು ಕೊರತೆ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ಕಾರಣದಿಂದಾಗಿ ಇದು ವಿಳಂಬವಾಗಿದೆ. ರಸ್ತೆ ಕಾಮಗಾರಿಗಳನ್ನು ಗುತ್ತಿಗೆದಾರರು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಶಾಸಕ ಎ ಟಿ ರಾಮಸ್ವಾಮಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪಿಎಂಜಿಎಸ್‌ವೈ ಯೋಜನೆಯಡಿ ತಾಲೂಕಿನ 30 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಇದರ ಒಟ್ಟು ವೆಚ್ಚ ₹19 ಕೋಟಿ.
ವಿಜಾಪುರ ಅರಣ್ಯ ಗ್ರಾಮದಿಂದ ಮುದಿಗೆರೆ ಗ್ರಾಮವಾಗಿ ಕೋನಾಪುರ ಗ್ರಾಮದವರೆಗೆ ಹಾಗೂ ಚೌರಗಲ್ ಗ್ರಾಮದಿಂದ ದೊಡ್ಡಕೊಪ್ಪಲು, ಮುಸವತ್ತೂರು ಮಾರ್ಗ ಕೊಳ್ಳಂಗಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಗ್ರಾಮಗಳ ಹಂತದಲ್ಲಿ ಕಾಂಕ್ರೀಟ್ ರಸ್ತೆ ಉಳಿದೆಡೆ ಡಾಂಬರ್ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.