ಗದಗ : ಯುವಕನೋರ್ವನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಮಲ್ಲರಡ್ಡಿ ಅಗಸನಕೊಪ್ಪ, ಶ್ರೀನಿವಾಸ ಅಗಸನಕೊಪ್ಪ ಎಂಬವರು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ರಾಘವೇಂದ್ರ ಪೂಜಾರ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಘವೇಂದ್ರ ಪೂಜಾರ, "ನಾನು ನನ್ನ ಮನೆಯ ಬಳಿ ನಿಂತಿದ್ದೆ. ಮೋದಿಯವರ ಭಾವಚಿತ್ರ ಸ್ಟೇಟಸ್ ಇಡ್ತಿಯಾ, ಮೋದಿ ಪೋಸ್ಟ್ಗೆ ಲೈಕ್ ಕೊಡ್ತಿಯಾ ಎಂದು ಹಲವರು ಹಲ್ಲೆ ನಡೆಸಿದರು. ಸಹೋದರರಾದ ಮಲ್ಲರಡ್ಡಿ ಅಗಸನಕೊಪ್ಪ ಮತ್ತು ಶ್ರೀನಿವಾಸ ಅಗಸನಕೊಪ್ಪ ಎಂಬವರು ಮನೆ ಬಂದು ಜಗಳ ಮಾಡಿದರು. ನಾನು ಮೋದಿಯವರ ಸ್ಟೇಟಸ್ ಇಟ್ಟಿರಲಿಲ್ಲ. ಆದರೂ ಮೋದಿ ಸ್ಟೇಟಸ್ ಹಾಕಿರುವುದಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು ಏಳೆಂಟು ಮಂದಿ ಬಂದಿದ್ದರು. ಈ ಇಬ್ಬರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಆರೋಪಿಸಿದರು. ಸದ್ಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹೇಳಿದರು.
ಮೋದಿ ಸ್ಟೇಟಸ್ ಇಟ್ಟಿರುವುದಾಗಿ ಆರೋಪಿಸಿ ನನ್ನ ತಮ್ಮನಿಗೆ ಹಲವು ಮಂದಿ ಬಂದು ಹಲ್ಲೆ ನಡೆಸಿದ್ದಾರೆ. ನಾನು ಮಧ್ಯಪ್ರವೇಶಿಸಿ ತಮ್ಮನನ್ನು ರಕ್ಷಿಸಲು ಹೋದಾಗ ನನಗೂ ಹೊಡೆದರು ಎಂದು ರಾಘವೇಂದ್ರ ಅವರ ಸಹೋದರಿ ಸುಧಾ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡ ರಾಜು ಕುರುಡಗಿ ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ದೆಹಲಿ ಮೂಲದ ವ್ಯಕ್ತಿಯೋರ್ವನನ್ನು ಕಾರವಾರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಜುನೈದ್ ಎಂಬಾತನೇ ಬಂಧಿತ ಆರೋಪಿ. ಬಂಧಿತ ಆರೋಪಿಯು ಕಾರವಾರ ನಿವಾಸಿಯಾದ ಕರುಣಾಕರ ತಳೇಕರ ಎಂಬವರಿಂದ ಸುಮಾರು 75 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿರುವುದಾಗಿ ಬೆಳಕಿಗೆ ಬಂದಿದೆ.
ಕರುಣಾಕರ್ ಸಾಮಾಜಿಕ ಜಾಲತಾಣದಲ್ಲಿ ಬಂದ Disney Cruise Line ಎಂಬ ಹೆಸರಿನ ಶಿಪ್‌ನಲ್ಲಿ ಉದ್ಯೋಗ ಇರುವ ಬಗ್ಗೆ ಜಾಹೀರಾತು ಕಂಡಿದ್ದಾರೆ. ಬಳಿಕ ಅದರಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾರೆ. ಈ ವೇಳೆ ಆರೋಪಿ ಸೈಯದ್ ಕರೆ ಸ್ವೀಕರಿಸಿದ್ದಾನೆ. ಬಳಿಕ ಆನ್ಲೈನ್ ಸಂದರ್ಶನವನ್ನು ನಡೆಸಿದ್ದಾನೆ. ಈ ವೇಳೆ ಉದ್ಯೋಗಕ್ಕಾಗಿ ತಗುಲುವ ವೆಚ್ಚ ಎಂದು ಹಂತಹಂತವಾಗಿ 75,19,138 ರೂಪಾಯಿಯನ್ನು ಜಮಾ ಮಾಡಿಸಿಕೊಂಡಿದ್ದಾನೆ. ಬಳಿಕ ನೌಕರಿ ನೀಡದೇ ಮೋಸ ಮಾಡಿದ್ದಾನೆ ಎಂದು ಕರುಣಾಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನಿಷೇಧಿತ ಪಿಎಫ್ಐ ಮುಖಂಡರ ಬಂಧನ ಪ್ರಕರಣ: 10,196 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ