ಗದಗ : ಜಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಾಣಂತಿ ಹಾಗೂ ಹಸುಗೂಸುಗಳು ತಮ್ಮ ಗ್ರಾಮಕ್ಕೆ ತೆರಳಲು ನಗು-ಮಗು ವಾಹನ ವ್ಯವಸ್ಥೆಯಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ನಗರದ ಜಿಮ್ಸ್ ಆಸ್ಪತ್ರೆ ಆಡಳಿತಕ್ಕೆ ಯಾರು ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ನಿತ್ಯವೂ ಒಂದಿಲ್ಲೊಂದು ಎಡವಟ್ಟಿನಿಂದ ಸುದ್ದಿಯಾಗುತ್ತಿರುತ್ತದೆ. ಇದೀಗ ಆಸ್ಪತ್ರೆಯಲ್ಲಿ ನಗು-ಮಗು ವಾಹನ ವ್ಯವಸ್ಥೆ ಇಲ್ಲದೆ ಬಾಣಂತಿ ಹಾಗೂ ಮಕ್ಕಳು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾದವರು ದೂರಿದ್ದಾರೆ.
ಸರ್ಕಾರ ಹೆರಿಗೆ ಬಳಿಕ ಬಾಣಂತಿ ಹಾಗೂ ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ನಗು-ಮಗು ವಾಹನ ಉಚಿತ ಸೇವೆ ಜಾರಿ ಮಾಡಿದೆ. ಆದರೆ ಜಿಮ್ಸ್ ಆಸ್ಪತ್ರೆಯಲ್ಲಿ ಈ ಸೇವೆ ಹಳ್ಳ ಹಿಡಿದಿದೆ ಎನ್ನಲಾಗ್ತಿದೆ. ಸೂಕ್ತ ನಿರ್ವಹಣೆ ಇಲ್ಲದೆ ನಗು-ಮಗು ವಾಹನಗಳು ಗುಜರಿಗೆ ಸೇರಿವೆ. ಬಡ ಜನರ ಪಾಲಿಗೆ ಈ ಸೇವೆ ಮರಿಚಿಕೆಯಾಗಿದೆ. ಬಾಣಂತಿ ಕುಟುಂಬ ವಾಹನದ ಸಿಬ್ಬಂದಿಗೆ ಕರೆ ಮಾಡಿದರೆ, ವಾಹನ ಕೆಟ್ಟು ಹೋಗಿದೆ ಎಂದು ನೆಪ ಹೇಳುತ್ತಾರೆ. ಇದು ಒಂದೆರಡು ದಿನಗಳ ಕಥೆಯಲ್ಲ. ಕಳೆದ ಒಂದು ತಿಂಗಳಿಂದ ಈ ಆಸ್ಪತ್ರೆಯಲ್ಲಿ ಬಾಣಂತಿಯರು ಗೋಳಾಡುತ್ತಿದ್ದಾರೆ.
ತಾಲೂಕಿನ ಮದಗಾನೂರ ಗ್ರಾಮದ ಬಾಣಂತಿ ಲಕ್ಷ್ಮಿ ಎಂಬುವರನ್ನು ವೈದ್ಯರು ಡಿಸ್ಚಾರ್ಜ್ ಮಾಡಿ ಮೂರ್ನಾಲ್ಕು ಗಂಟೆಯಾದರೂ ಊರಿಗೆ ತೆರಳದೆ ಆಸ್ಪತ್ರೆಯಲ್ಲೇ ವಾಹನಕ್ಕಾಗಿ ಕಾಯುತ್ತಿದ್ದರು. ಊರಿಗೆ ಹೋಗಲು ಹಣವಿಲ್ಲದೆ ಬಡ ಕುಟುಂಬ ಒದ್ದಾಡುತ್ತಿತ್ತು. ಕೇವಲ 100 ರೂ. ಮಾತ್ರ ಇದೆ. ತಿಂಡಿನೂ ಮಾಡಿಲ್ಲ ರೀ...ಬಾಣಂತಿಯನ್ನು ಊರಿಗೆ ಕರೆದುಕೊಂಡು ಹೋಗೋದು ಹ್ಯಾಂಗ್ರಿ ಎಂದು ಪೋಷಕರು ಅಳಲು ತೋಡಿಕೊಂಡರು.
ಜಿಮ್ಸ್ ಹೆರಿಗೆ ಆಸ್ಪತ್ರೆಯಲ್ಲಿ ನಿತ್ಯವೂ 15-20 ಹೆರಿಗೆ ಆಗುತ್ತವೆ. ಅಷ್ಟೇ ಸಂಖ್ಯೆಯಲ್ಲಿ ಡಿಸ್ಚಾರ್ಜ್ ಕೂಡ ಆಗ್ತಾರೆ. ಹಣವಂತರು ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ವಾಹನ ಮಾಡಿಕೊಂಡು ಹೋಗ್ತಾರೆ. ಆದರೆ ಬಡ ಜನರಿಗೆ ನಗು-ಮಗು ವಾಹನ ಸೇವೆ ದೊರೆಯುತ್ತಿಲ್ಲ. ಈ ಬಗ್ಗೆ ಜಿಮ್ಸ್ ನಿರ್ದೇಶಕ ಪಿ ಎಸ್. ಭೂಸರೆಡ್ಡಿ ಮತ್ತು ಮೆಡಿಕಲ್ ಸೂಪರಿಂಡೆಂಟ್ ಡಾ. ಮ್ಯಾಗೇರಿ ಅವರಿಗೆ ಲಿಖಿತವಾಗಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ರಿಪೇರಿ ಮಾಡಿಸುವ ಗೋಜಿಗೆ ಹೋಗುತ್ತಿಲ್ಲ ಎನ್ನಲಾಗ್ತಿದೆ.
ಈ ಕುರಿತು ಮಾತನಾಡಿರುವ ಆಸ್ಪತ್ರೆಯ ಸೂಪರಿಂಡೆಂಟ್ ರಾಜಶೇಖರ್ ಮ್ಯಾಗೇರಿ, ಅರೋಗ್ಯ ಇಲಾಖೆಯಿಂದ ಬಂದಿರುವ ನಗು-ಮೊಗು ವಾಹನ ಸದ್ಯಕ್ಕೆ ರಿಪೇರಿಗೆ ಬಂದಿರುವ ಮಾಹಿತಿ ಇದೆ. ಇಂಜಿನ್ ದೋಷವಿದ್ದು, ಅದಕ್ಕೆ ಪರ್ಯಾಯವಾಗಿ ನಮ್ಮಲ್ಲಿರುವ ಇನ್ನೊಂದು ವಾಹನವನ್ನು ಬಳಸುವುದಾಗಿ ಹೇಳಿದ್ದಾರೆ.
ಸರ್ಕಾರ ಬಡ ಜನರ ಯೋಜನೆಗೆ ಜಿಮ್ಸ್ ಆಸ್ಪತ್ರೆಗೆ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಆದರೆ ಜಿಮ್ಸ್ ಆಡಳಿತ ಮಾತ್ರ ನಗು-ಮಗು ವಾಹನ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಜಿಮ್ಸ್ ಕಿವಿ ಹಿಂಡಬೇಕಾದ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕೂಡ ಮೌನವಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಇದನ್ನೂ ಓದಿ: ಪಡಿತರ ನೀಡುವ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಆರೋಪ: ನೊಂದ ಮಹಿಳೆ ಮನೆಗೆ ಸಚಿವ ಸುಧಾಕರ್ ಭೇಟಿ