ಗದಗ: ''2018ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್ಗೆ ಸೋಲಾಗಲಿಲ್ಲ. ಕೆಲವರು ಬೇಕಂತಲೇ ಈ ರೀತಿ ಉಯಿಲು ಎಬ್ಬಿಸಿದರು. ನಾವು ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಶಿಫಾರಸ್ಸು ಮಾಡಲು ಸಿಎಂಗೆ ಮನವಿ ಮಾಡ್ತೇವೆ'' ಎಂದು ಗದಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸಿದ್ದರಾಮಯ್ಯನವರು ಬದ್ಧತೆಗೆ ಹೆಸರಾಗಿರುವಂತವರು. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಅನ್ನೋದನ್ನು ಮನಗಂಡಿದ್ದರು. ಹೀಗಾಗಿ ನಾಗಮೋಹನ್ ದಾಸ್ ಅವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ನಂತರ ಕೆಲವು ವ್ಯಕ್ತಿಗಳು ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದರಿಂದಲೇ ಹಿನ್ನಡೆಯಾಯ್ತು ಅಂತ ಉಯಿಲನ್ನು ಎಬ್ಬಿಸಿದರು. ಆದ್ರೆ, ವಾಸ್ತವವಾಗಿ ಲಿಂಗಾಯತ ಧರ್ಮದ ಶಿಫಾರಸ್ಸು ಮಾಡಿದ್ದಕ್ಕೆ ಹಿನ್ನಡೆಯಾಗಿಲ್ಲ.
ಆದ್ರೆ, ಯಾವುದೇ ಒಂದು ಆಡಳಿತರೂಢ ಸರ್ಕಾರದ ಪಕ್ಷದ ಬಗ್ಗೆ ವಿರೋಧಿ ಅಲೆ ಇರುತ್ತೆ. ಹೀಗಾಗಿ ಹಿಂದಿನ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರು. ಆದ್ರೆ, ಅದೇ ಮಾತನ್ನು ಈಗ ಬಿಜೆಪಿ ಸರ್ಕಾರ ಲಿಂಗಾಯತ ಸ್ವಧರ್ಮಕ್ಕೆ ಮಾನ್ಯತೆ ನೀಡಲಿಲ್ಲ. ಆ ಕಾರಣಕ್ಕೆ ಹಿನ್ನಡೆ ಆಯಿತು ಅಂತ ಹೇಳೋದು ತಪ್ಪಾಗುತ್ತೆ. ಒಂದೊಂದು ಸಂದರ್ಭದಲ್ಲಿ ಒಂದೊಂದು ವಿಷಯ ಚರ್ಚೆಯಲ್ಲಿ ಇರುತ್ತವೆ'' ಎಂದು ತಿಳಿಸಿದರು.
''ಆಡಳಿತ ವಿರೋಧಿ ಅಲೆಯಿಂದಲೇ ಸೋಲಾಯ್ತು ಅನ್ನೋದರ ಬಗ್ಗೆ ಸಿದ್ಧರಾಮಯ್ಯನವರಿಗೆ ಗೊತ್ತಿತ್ತು ಲಿಂಗಾಯತ ಧರ್ಮದ ಶಿಫಾರಸ್ಸು ಹಿನ್ನೆಲೆಯಲ್ಲಿ ನಮಗೆ ಸೋಲಾಯ್ತು ಅಂತ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಮತ್ತೆ ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಳ್ಳಲಿದ್ದೇವೆ'' ಎಂದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.
ಸಿದ್ಧರಾಮ ಸ್ವಾಮೀಜಿ ಅಸಮಾಧಾನ: ''ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ಪೂರ್ವಾಗ್ರಹ ಪೀಡಿತವಾಗಿ ಮಾನ್ಯತೆ ನೀಡಲಿಲ್ಲ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅಂತ ಹಿಂದಿನ ಸಿದ್ದರಾಮಯ್ಯನವರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು. ಸಿಎಂ ಅವರು ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ರು. ಸಮಿತಿ ಮೂಲಕ ವರದಿಯಲ್ಲಿ ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮ ಅಂತ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಆದ್ರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ವರದಿಯನ್ನು ವಿಸ್ತೃತವಾಗಿ ಅಧ್ಯಯನ ಮಾಡಲಿಲ್ಲ. ಯಾವುದೋ ಒಂದು ಪೂರ್ವಾಗ್ರಹಕ್ಕೆ ಒಳಗಾಗಿ ಇದನ್ನ ಮಾನ್ಯ ಮಾಡಲು ಕಷ್ಟದಾಯಕ ಅಂತ ಹೇಳಿತು. ಸದ್ಯ ಈಗ ಅದರ ಬಗ್ಗೆ ಇನ್ನೂ ಸ್ಪಷ್ಟವಾದ ಯಾವ ಸಂದೇಶ ಬಂದಿಲ್ಲ. ಮುಂದಿನ ನಡೆಯ ಬಗ್ಗೆ ಸಮುದಾಯದ ಜೊತೆಗೆ ಚರ್ಚೆ ಮಾಡ್ತೇವೆ, ಯಾವ ಕಾರಣಕ್ಕೆ ತಿರಸ್ಕೃತಗೊಂಡಿದೆ ಎಂಬುದನ್ನ ಗಮನಿಸಿ, ಆ ಎಲ್ಲಾ ದಾಖಲೆಗಳನ್ನು ಒದಗಿಸುತ್ತೇವೆ. ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡಲು ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತೇವೆ'' ಎಂದು ಸಿದ್ಧರಾಮ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ, ಯಾವಾಗಲೂ ಹಿಟ್ ಅಂಡ್ ರನ್ ಕೇಸ್: ಸಿಎಂ ಸಿದ್ದರಾಮಯ್ಯ