ಗದಗ: ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಎರಡು ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಇಬ್ಬರು ವ್ಯಕ್ತಿಗಳು ಗದಗದ ಕಳಸಾಪುರ ರಿಂಗ್ ರೋಡ್ ಬಳಿಯ ಬಾಪೂಜಿ ನಗರದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದರು. ಇವರ ಹಾವ ಭಾವ ಗಮನಿಸಿದ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದಾಗ ನಗರದಲ್ಲಿ ನಡೆದ ಎರಡು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರ ಬಗ್ಗೆ ಬಾಯಿಬಿಟ್ಟಿದ್ದಾರೆ.
ಕಾಶಿಮ್ ಹುಬ್ಬಳ್ಳಿ ಮತ್ತು ಸುನಿಲ್ ಮುಳಗುಂದ ಬಂಧಿತ ಆರೋಪಿಗಳು. ಕಾಶಿಮ್ ಹುಬ್ಬಳ್ಳಿ, ತಾರಿಹಾಳ ನಿವಾಸಿಯಾಗಿದ್ರೆ, ಸುನಿಲ್ ಗದಗ ನಗರದ ನಿವಾಸಿ. ಬಂಧಿತರಿಂದ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ.
25.11.2020 ರಂದು ಗಣೇಶ ಕಾಲೋನಿ ನಿವಾಸಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಎಂಬುವರ ಮನೆ ಬೀಗ ಮುರಿದು ಸುಮಾರು 2 ಲಕ್ಷ 37 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. 17.12.2020. ರಂದು ಶಿವಾನಂದ ನಗರದಲ್ಲಿ ಓರ್ವ ಮಹಿಳೆಯ ಕೊರಳಲ್ಲಿನ 1ಲಕ್ಷ 35 ಸಾವಿರ ರೂ. ಮೌಲ್ಯದ ಚಿನ್ನದ ತಾಳಿ ಎಗರಿಸಿ ಪರಾರಿಯಾಗಿದ್ದರು. ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ದೇವರ ಹುಂಡಿ ಕಳ್ಳತನ ಮಾಡಿದ್ದ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.