ಗದಗ: ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನೀಡಿದ್ದ ನೋಟಿಸ್ಗೆ ಹೆದರಿ ನೌಕರನೊಬ್ಬ ನೇಣಿಗೆ ಶರಣಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಶಿರಹಟ್ಟಿ ಪಟ್ಟಣ ಪಂಚಾಯತ್ನಲ್ಲಿ ವಾಲ್ ಮೆನ್ ಆಗಿ ಕೆಲಸ ಮಾಡ್ತಿದ್ದ ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದ ಬಸವರಾಜ್ ಹೊಸೂರ(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಾನು ವಾಸವಿದ್ದ ಮನೆಯಲ್ಲೇ ಬಸವರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಸವರಾಜ್ ಆತ್ಮಹತ್ಯೆ ಸುದ್ದಿ ಹರಡುತ್ತಿದ್ದಂತೆಯೇ ಸಾರ್ವಜನಿಕರು ಪಟ್ಟಣ ಪಂಚಾಯತಿಯ ಬಳಿ ಜಮಾಯಿಸಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಘೋಷಣೆ ಕೂಗಿದ್ರು. ಸದ್ಯ ಶಿರಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬೀಡುಬಿಟ್ಟಿದ್ದಾರೆ. ಗದಗ ಜಿಲ್ಲೆಯ ನಗರಾಭಿವೃದ್ಧಿ ಕೋಶ ಹಾಗೂ ಉಪ ವಿಭಾಗಾಧಿಕಾರಿಗಳು ಭೇಡಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿರುವ ಶೋಭಾ ಬೆಳ್ಳಕೊಪ್ಪ, ಅಕ್ರಮ ನಳಗಳ ಸಂಪರ್ಕ ಕಡಿತಗೊಳಿಸಿ ವರದಿ ನೀಡುವಂತೆ ಬಸವರಾಜ್ಗೆ ನೋಟೀಸ್ ನೀಡಿದ್ದಾರೆ ಎನ್ನಲಾಗಿದ್ದು, ಈ ನೋಟೀಸ್ಗೆ ಹೆದರಿ ಆತ ನೇಣಿಗೆ ಶರಣಾಗಿದ್ದಾನೆ ಎಂಬ ಆರೋಪವಿದೆ.