ಗದಗ: ಜಗಜ್ಯೋತಿ ಬಸವಣ್ಣನವರ ಕುರಿತು ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎತ್ತನ್ನು ಪೂಜಿಸಿದ ನಡೆಯನ್ನ ಯಡಿಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಖಂಡಿಸಿದ್ದಾರೆ ಮತ್ತು ಎಲ್ಲಾ ಬಸವ ಅಭಿಮಾನಿಗಳು ಈ ಕ್ರಮ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀ ರಂಭಾಪುರಿ ಶ್ರೀಗಳವರು ಬ್ರಾಹ್ಮಣರಾಗಿದ್ದ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರು ಎಂಬ ಆಧಾರ ರಹಿತ ಹುಸಿ ಹೇಳಿಕೆ ನೀಡಿರುತ್ತಾರೆ. ಅಲ್ಲದೇ ತಾವು ಪಾಲಿಸದೇ ಇರುವ ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನವರ ನುಡಿಯನ್ನೂ ಪಾಲಿಸಬೇಕೆಂದು ತಿಳಿ ಹೇಳಿದ್ದಾರೆ. ಅದನ್ನು ಅವರೇ ಪಾಲಿಸಿದ್ದರೆ ಇನ್ನೂ ಚೆನ್ನಾಗಿತ್ತು. ಬಸವ ಜಯಂತಿಯ ಜೊತೆಗೆ ಏಕೋರಾಮಾರಾಧ್ಯರ ಜಯಂತಿಯನ್ನೂ ಆಚರಿಸಬೇಕೆಂದು ಹೇಳಿರುವುದು ಇನ್ನೂ ಅಭಾಸಕಾರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ, ಶಾಸಕ ಶ್ರೀ ಶಾಮನೂರು ಶಿವಶಂಕರಪ್ಪ ಅವರು ಎತ್ತನ್ನು ಪೂಜಿಸಿ, ಬಸವಣ್ಣನವರನ್ನು ಎತ್ತಿಗೆ ಹೋಲಿಸಿ ಬಸವ ಜಯಂತಿ ಆಚರಿಸಿದ ಚಿತ್ರವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಒಂದು ಗೌರವಾನ್ವಿತ ಸಂಸ್ಥೆಯ ಅಧ್ಯಕ್ಷರಾದ ಅವರಿಗೆ ಒಬ್ಬ ಸಾಮಾನ್ಯ ಮನುಷ್ಯನಲ್ಲಿರಬೇಕಾದ ಜ್ಞಾನವೂ ಇಲ್ಲದಿರುವುದು ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ. ಈ ಬಗ್ಗೆ ಅವರು ಬಸವ ಭಕ್ತರನ್ನು ಕ್ಷಮೆ ಕೋರಿ ತಮ್ಮ ಗೌರವವನ್ನು ಕಾಯ್ದುಕೊಳ್ಳುವುದು ಒಳಿತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಕೃತ ಮನಸ್ಸಿನ ಜನ ಐತಿಹಾಸಿಕ ಮಹಾಪುರುಷ, ಲಿಂಗಾಯತ ಧರ್ಮ ಸಂಸ್ಥಾಪಕ ಗುರು ಬಸವಣ್ಣನವರನ್ನು ಎತ್ತಿ(ಪ್ರಾಣಿ)ಗೆ ಹೋಲಿಸಿದ ಚಿತ್ರ ರಚಿಸಿ ಅದರಲ್ಲಿ ಬಸವ (ನಂದೀಶ್ವರ) ಜಯಂತಿಯ ಶುಭಾಶಯಗಳು ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದಿದ್ದಾರೆ. ಇಂತಹ ವಿಕೃತ ಮನಸ್ಸಿನ ವ್ಯಕ್ತಿಗಳ ಬಗ್ಗೆ ಬಸವಭಕ್ತರು ಜಾಗೃತರಾಗಿರಬೇಕು ಮತ್ತು ಖಂಡಿಸಬೇಕು ಎಂದವರು ಕರೆ ನೀಡಿದ್ದಾರೆ.