ಗದಗ: ವರ್ಷದ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮಾಧಿಯಿಂದ ಹೊರತೆಗೆದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೆಣಸಿನಕಾಯಿ ವ್ಯಾಪಾರಿ ಚನ್ನವೀರಪ್ಪ ವೀರಪ್ಪ ಶೆಟ್ಟರ್ (40) ಎಂಬುವವರು 9-6-2018 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು. ಬಳಿಕ ಆತನ ಸಾವಿನ ಬಗ್ಗೆ ಸಂಶಯಗೊಂಡ ಪತ್ನಿ ಸುಮಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ, ಶವ ಪರೀಕ್ಷೆಗಾಗಿ ಜಕ್ಕಲಿ ಗ್ರಾಮದಲ್ಲಿ ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರಗಳನ್ನು ಬಳಸಿ, ಶವ ಹೊರ ತೆಗೆಯುವುದಕ್ಕೆ ಮುಂದಾದ್ರು.
ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ್ ನೇತೃತ್ವದಲ್ಲಿ ಗ್ರಾಮದಲ್ಲಿ ಸಮಾಧಿಯನ್ನು ಅಗೆಯಲಾಗುತ್ತಿದ್ದು, ಸ್ಥಳದಲ್ಲಿ ರೋಣ ಪಿಎಸ್‌ಐ ಜೂಲಕಟ್ಟಿ, ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ಮುಕ್ಕಾಂ ಹೂಡಿದ್ದಾರೆ.
ವರ್ಷದ ಬಳಿಕ ಸಮಾಧಿಯಿಂದ ಶವ ಹೊರ ತೆಗೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಸ್ಥರು ಕುತೂಹಲದಿಂದ ಸಮಾಧಿಯತ್ತ ತಂಡೋಪತಂಡವಾಗಿ ಆಗಮಿಸಿದ್ದರು.