ಗದಗ: ನೀರು ಕುಡಿಯಲು ಹೋಗಿದ್ದ ಸಹೋದರಿಯರು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಅಸುನೀಗಿರುವ ದುರ್ಘಟನೆ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ಸೋಮವಾರ ನಡೆದಿದೆ. ಬಸವರಾಜ ನೂರಪ್ಪ ಲಮಾಣಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಘಟನೆ ಸಂಭವಿಸಿದೆ. ಅತ್ತಿಕಟ್ಟಿ ತಾಂಡಾದ ಸುನೀತಾ(13), ಅಂಕಿತಾ(10) ಹಾಗೂ ಡೋಣಿ ತಾಂಡಾದ ಸುನೀತಾ ಲೋಕೇಶ್ ಲಮಾಣಿ(10) ಮೃತರು.
ಬಾಲಕಿಯರು ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ್ದರು. ನೀರಿನ ದಾಹ ನೀಗಿಸಿಕೊಳ್ಳಲು ಕೃಷಿ ಹೊಂಡಕ್ಕಿಳಿದಿದ್ದಾರೆ. ಆಗ ಕಾಲು ಜಾರಿ ಬಿದ್ದು ಮೃತಪಟ್ಟರು ಎಂದು ಹೇಳಲಾಗುತ್ತಿದೆ. ತಂದೆ, ತಾಯಿ ಜೊತೆ ಗೋವಾದಲ್ಲಿ ವಾಸವಿರುವ ಅತ್ತಿಕಟ್ಟಿ ತಾಂಡಾದ ಸುನೀತಾ ಹಾಗೂ ಅಂಕಿತಾ ಚಿಕ್ಕಪ್ಪನ ಮದುವೆಗೆ ಬಂದಿದ್ದರಂತೆ.
ಇದನ್ನೂ ಓದಿ: ಪ್ರಜ್ಞೆತಪ್ಪಿದ ವ್ಯಕ್ತಿ ರಕ್ಷಿಸಿ ಮಾನವೀಯತೆ ಮೆರೆದ ಕಾನ್ಸ್ಟೇಬಲ್.. ಸಾಥ್ ನೀಡಿದ ಎಎಸ್‌ಪಿ
ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಮುಂಡರಗಿ ತಹಶೀಲ್ದಾರ ಆಶಪ್ಪ ಪೂಜಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.