ಗದಗ : ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಮಾಡುತ್ತಾರೆ ಎಂಬುದು ಉಹಾಪೋಹ, ಸತ್ಯಕ್ಕೆ ದೂರವಾಗಿದೆ. ಇದೆಲ್ಲಾ ಕಾಂಗ್ರೆಸ್ ಕುತಂತ್ರ ಎಂದು ಆರೋಪಿಸಿದ್ದಾರೆ. ಒಂದೆಡೆ ಡಿ ಕೆ ಶಿವಕುಮಾರ್ ನಾನೇ ಸಿಎಂ ಅಂತಾರೆ, ಮತ್ತೊಂದೆಡೆ ಸಿದ್ದರಾಮಯ್ಯ ನಾನೇ ಸಿಎಂ ಅಂತಿದ್ದಾರೆ.
ಕಾಂಗ್ರೆಸ್ ಹಗಲು ಕನಸು ಕಾಣುತ್ತಿದೆ. ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ. ಲಿಂಗಾಯತ ಸಮುದಾಯದ ಮತ್ತೊಬ್ಬರನ್ನು ಸಿಎಂ ಮಾಡ್ತಾರೇ ಅನ್ನೋ ಪ್ರಶ್ನೆಗೆ ಯಡಿಯೂರಪ್ಪ ಅವರೂ ಲಿಂಗಾಯತರೇ ಎಂದರು.
ಶಾಸಕ ಮಿತ್ರ ಮಂಡಳಿಯಲ್ಲಿ ಸ್ಥಾನ ಮಾನದ ಕುರಿತು ಉಂಟಾಗಿರುವ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ಬಣಗಳಿಲ್ಲ. ಅನ್ಯ ಪಕ್ಷ ಬಿಟ್ಟು ಬಿಜೆಪಿಗೆ ಬಂದ ಶಾಸಕರಿಗೆ ಶೀಘ್ರದಲ್ಲೇ ಸೂಕ್ತ ಸ್ಥಾನಮಾನ ಸಿಗಲಿದೆ. ಕೆಲವರಿಗೆ ಸಿಕ್ಕಿದೆ, ಇನ್ನೂ ಕೆಲವರಿಗೆ ಸಿಗಬೇಕಾಗಿದೆ. ಎಂಟಿಬಿ ನಾಗರಾಜ್, ಆರ್ ಶಂಕರ, ಮುನಿರತ್ನ, ಪ್ರತಾಪ್ ಗೌಡ ಅವರಿಗೆ ಸೂಕ್ತ ಸ್ಥಾನ ಸಿಗಬೇಕು ಎಂದರು.
ನಾಳೆ ವಾರಣಾಸಿಗೆ ಪ್ರಧಾನಿ ಮೋದಿ: ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ
ಯಡಿಯೂರಪ್ಪ ಅವರು ಏನು ಮಾತು ಕೊಟ್ಟಿದ್ದರೋ, ಆ ಪ್ರಕಾರ ನಡೆದುಕೊಂಡು ಬಂದಿದ್ದಾರೆ. ಎಮ್ಎಲ್ಸಿಗಳನ್ನಾಗಿ ಮಾಡಿದ್ದಾರೆ. ಮಂತ್ರಿ ಮಂಡಲದಲ್ಲಿ ಅವಕಾಶ ಕೊಡುವ ಭರವಸೆ ಇದೆ. ಎಂಟಿಬಿ ನಾಗರಾಜ್ ಅವರು ಮಂತ್ರಿಯಾಗಿ ಬಿಟ್ಟು ಬಂದವರು. ಹಾಗಾಗಿ, ಅವರು ಬಹಿರಂಗವಾಗಿ ಅಸಮಾಧಾನಗೊಂಡಿದ್ದಾರೆ. ಅವರಿಗೂ ಸೂಕ್ತ ಸ್ಥಾನ ನೀಡ್ತಾರೆ ಎನ್ನುವ ಭರವಸೆ ಇದೆ ಎಂದರು.