ಗದಗ: ಲಾಕ್ಡೌನ್ನಿಂದಾಗಿ ಬದುಕು ಕಳೆದುಕೊಂಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ಜನರು ತಲುಪಿದ್ದಾರೆ. ಕೆಲವರು ತಮ್ಮ ವೃತ್ತಿಯನ್ನೇ ಬಿಟ್ಟು ಕೂಲಿ ಮಾಡುವ ದಾರಿ ಹುಡುಕಿಕೊಳ್ಳುತ್ತಿದ್ದಾರೆ. ಇನ್ನು ಗದಗದ ರಂಗಪ್ಪಜ್ಜ ಅಂತಲೇ ಹೆಸರುಗಳಿಸಿರುವ ರಂಗಪ್ಪ ಹುಯಿಲಗೋಳ ತಮ್ಮ ಜೀವನವನ್ನು ರಂಗಭೂಮಿ ಸೇವೆಗೆ ಮುಡಿಪಾಗಿಟ್ಟಿದ್ದರು. ಆದರೆ, ಲಾಕ್ಡೌನ್ನಿಂದಾಗಿ ವಸ್ತ್ರ ವಿನ್ಯಾಸಕನ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.ಇದರ ಬಗ್ಗೆ ನಾವು ವರದಿ ಕೂಡ ಮಾಡಿದ್ದೆವು.
ಅಲ್ಲದೆ, ಕಳೆದ ಐದಾರು ತಿಂಗಳಿನಿಂದ ಮಾಸಾಶನವೂ ಸಿಗದೇ ಬದುಕು ನಡೆಸುವುದೇ ಕಷ್ಟವಾಗಿತ್ತು. ಈ ಕುರಿತಂತೆ ಈಟಿವಿ ಭಾರತ ‘ಬದುಕಿನ ಬಣ್ಣವನ್ನೇ ಅಳಿಸಿದ ಕೊರೊನಾ, ಬಣ್ಣ ಹಚ್ಚಿದಾತನ ಬದುಕು ಬೀದಿಗೆ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ರಂಗಕರ್ಮಿ ರಂಗಪ್ಪಜ್ಜನಿಗೆ ಕರೆ ಮಾಡಿ ಅವರಿಗೆ ಸಲ್ಲಬೇಕಾಗಿದ್ದ ಮಾಸಾಶನ ನೀಡುವುದಾಗಿ ತಿಳಿಸಿದ್ದಾರೆ.
ನಮ್ಮ ಹಿಂದಿನ ವರದಿ :ಬದುಕಿನ ಬಣ್ಣವನ್ನೇ ಅಳಿಸಿದ ಕೊರೊನಾ, ಬಣ್ಣ ಹಚ್ಚಿದಾತನ ಬದುಕು ಬೀದಿಗೆ
ದಶಕಗಳಿಂದ ರಂಗಪ್ಪಜ್ಜನ ಕುಟುಂಬ ರಂಗಭೂಮಿ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟಿದೆ. ನಾಟಕ, ಯಕ್ಷಗಾನ, ಬಯಲಾಟಗಳಿಗೆ ಡ್ರಾಮಾ ಸೀನ್ಸ್ ಹಾಕುವುದು, ಪಾತ್ರಧಾರಿಗಳ ಮುಖಕ್ಕೆ ಬಣ್ಣ ಹಚ್ಚುವುದು, ಪಾತ್ರಗಳಿಗೆ ತಕ್ಕಂತೆ ಉಡುಗೆ, ತೊಡುಗೆ, ಆಯುಧ ಹಾಗೂ ರಂಗಸಜ್ಜಿಕೆಯ ಅನೇಕ ಸಾಮಗ್ರಿಗಳನ್ನು ಒದಗಿಸುವುದು ಇವರ ಕಾಯಕವಾಗಿತ್ತು. ಆದರೆ, ಕೊರೊನಾ ವೈರಸ್ ಇವರ ಬಣ್ಣದ ಬದುಕಿಗೆ ಕೊಳ್ಳಿ ಇಟ್ಟಿತು.
ಹೀಗಾಗಿ ಮನೆಯ ಜವಾಬ್ದಾರಿ ನಿಭಾಯಿಸುವುದಕ್ಕೂ ತೊಂದರೆ ಅನುಭವಿಸುತ್ತಿದ್ದರು. ಐದಾರು ತಿಂಗಳಿನಿಂದ ರಂಗಪ್ಪಜ್ಜನಿಗೆ ಬರಬೇಕಾಗಿದ್ದ ಕಲಾವಿದರ ಮಾಸಾಶನವೂ ನಿಂತು ಹೋಗಿತ್ತು. ಕಚೇರಿಗೆ ಅಲೆದಾಡಿದ್ರೂ ಅಧಿಕಾರಿ ವರ್ಗ ಕ್ಯಾರೆ ಎನ್ನುತ್ತಿರಲಿಲ್ಲ. ಇದೀಗ ಇವರ ಬದುಕಿನಲ್ಲೂ ಹೊಸ ಭರವಸೆ ಮೂಡಿದ್ದು, ಈ ಮೂಲಕ ಕಲಾವಿದ ರಂಗಪ್ಪಜ್ಜ ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.