ಗದಗ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಸ್ಟೋರ್ ರೂಮ್ವೊಂದರಲ್ಲಿ ಬೇಕಾಬಿಟ್ಟಿಯಾಗಿ ರಾಷ್ಟ್ರಧ್ವಜವನ್ನು ಎಸೆದಿದ್ದಾರೆ ಎನ್ನಲಾಗ್ತಿದೆ.
ಯಾವಗಲ್ಲ ಗ್ರಾಮ ಪಂಚಾಯತ್ ಪಿಡಿಓ ಮತ್ತು ಅಲ್ಲಿನ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಪ್ರತ್ಯಕ್ಷ ಉದಾಹರಣೆ ಆಗಿದೆ. ಹಾಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಯಾವಗಲ್ಲ ಗ್ರಾಪಂ ಪಿಡಿಓ ದೇವರಡ್ಡಿ ಹಂಚಿನಾಳ ಅವರನ್ನು ಕೇಳಿದರೆ, ಇದು ನಾನಿಲ್ಲದ ವೇಳೆ ಯಾರೋ ಬೇಕಂತಲೆ ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಯಾರಿಗೋ ಸಿಗುವಂತೆ ರಾಷ್ಟ್ರಧ್ವಜವನ್ನ ಹೊರಗಡೆ ಇಟ್ಟಿದ್ದೇಕೆ ಅಂತಾ ಪ್ರಶ್ನಿಸಿದಾಗ ಪಿಡಿಓ ದೇವರಡ್ಡಿ ಬಳಿ ಉತ್ತರವಿಲ್ಲದೆ ತಬ್ಬಿಬ್ಬಾದರು. ಇವರ ಬೇಜವಾಬ್ದಾರಿತನದಿಂದಲೇ ಈ ರೀತಿಯ ಘಟನೆ ನಡೆದಿದೆ. ಹಾಗಾಗಿ ಜಿಲ್ಲಾ ಪಂಚಾಯತ್ ಸಿಇಓ ಅವರು ಗಮನ ಹರಿಸಿ ಪಿಡಿಓ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.