ಗದಗ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಸಾವನ್ನಪ್ಪಿರುವ ಘಟನೆ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.
34 ವರ್ಷದ ವೀರಪ್ಪ ತಹಶೀಲ್ದಾರ ಮೃತ ಯೋಧನಾಗಿದ್ದು, ಕೆಲವು ದಿನಗಳಿಂದ ನಿಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಯೋಧನಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದ್ದವು. ಆದ್ದರಿಂದ ಅವರ ಗಂಟಲ ದ್ರವವನ್ನು ಕೋವಿಡ್- 19 ಟೆಸ್ಟ್ಗೆ ಕಳುಹಿಸಲಾಗಿತ್ತು. ಆದರೆ ವರದಿಯೂ ನೆಗೆಟಿವ್ ಎಂದು ಬಂದಿತ್ತು.
![The death of a soldier who was on vacation in gadag](https://etvbharatimages.akamaized.net/etvbharat/prod-images/6906256_thum.png)
ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಯೋಧ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಮೃತ ಯೋಧನು 158ನೇ ಬೆಟಾಲಿಯನ್ ಬಿಎಸ್ಎಫ್ ವೆಸ್ಟ್ ಬೆಂಗಾಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2006 ರಿಂದ ಸೇವೆ ಆರಂಭಿಸಿದ್ದ ಯೋಧ, ರಜೆಗಾಗಿ ಊರಿಗೆ ಬಂದಿದ್ದರು. ಏಪ್ರಿಲ್ 15ಕ್ಕೆ ರಜೆ ಮುಗಿದಿದ್ದರೂ ಲಾಕ್ಡೌನ್ ಹಿನ್ನೆಲೆ ಊರಿನಲ್ಲಿಯೇ ಉಳಿದುಕೊಂಡಿದ್ದರು. ಲಾಕ್ಡೌನ್ ಮುಗಿದ ಬಳಿಕ ಸೇನೆ ಸೇರಿಕೊಳ್ಳಬೇಕಿದ್ದ ಯೋಧನು, ಲಾಕ್ಡೌನ್ ನಡುವೆಯೇ ವಿಧಿಯಾಟದಿಂದ ಬದುಕನ್ನು ಅಂತ್ಯಗೊಳಿಸಿದ್ದಾರೆ. ಮೃತ ಯೋಧನು ತಂದೆ-ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಜಿಲ್ಲಾಡಳಿತದಿಂದ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.