ಗದಗ : ಕಾರಿನ ವ್ಯಾಮೋಹಕ್ಕೆ ಒಳಗಾಗಿ ಶಿಕ್ಷಕಿಯೊಬ್ಬರು ಸುಮಾರು 2 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಪೇಚಾಡಿದ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಗ್ರಾಮದ ಹಿರೇಮಠ ಓಣಿ ನಿವಾಸಿ ಹೈಸ್ಕೂಲ್ ಶಿಕ್ಷಕಿ ಪ್ರಭಾವತಿ ವೀರಪ್ಪ ಜುಟ್ಲದ್ ಮತ್ತು ಅವರ ಮಗಳು ವರ್ಷಾ ರಾಮನಗೌಡ ಪಾಟೀಲ್ ಅವರು ಅಪರಿಚಿತ ಕರೆಯೊಂದರಿಂದ ಬಂದ ಕಾರಿನ ಬಹುಮಾನದ ಆಸೆಗೆ ಸಿಕ್ಕಿ ಈಗ ಸುಮಾರು ಒಟ್ಟು 2 ಲಕ್ಷ 39 ಸಾವಿರದ 500 ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಗದಗ ಸೈಬರ್ ಸ್ಟೇಷನ್‌ನಲ್ಲಿ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ : ನಿನ್ನೆ ಸಾಯಂಕಾಲ ಮೊಬೈಲ್ ನಂ-9433164780, 9088970277 ಈ ಎರಡು ಅಪರಿಚಿತ ನಂಬರ್‌ಗಳಿಂದ ಶಿಕ್ಷಕಿ ಪ್ರಭಾವತಿಯವರಿಗೆ ಕರೆ ಮಾಡ್ತಾರೆ. ‘ಹಲೋ ಮೇಡಂ, ನಾವು ಸ್ನ್ಯಾಪ್‌ಡೀಲ್ ಕಂಪನಿಯಿಂದ. ನಿಮಗೆ ಬಹುಮಾನವಾಗಿ ಒಂದು ಕಾರ್ ಬಂದಿದೆ. ನಿಮ್ಗೆ ಹಣಬೇಕೋ ಇಲ್ಲ ಕಾರ್ ಬೇಕೋ ಅಂತಾ ತಿಳಿಸ್ತಾರೆ. ಯಾವುದಾದ್ರೂ ತಗೊಳ್ಳಿ. ಮೆಂಬರ್‌ಶಿಪ್ ಮಾಡಿಸಬೇಕು, ತೆರಿಗೆ ಇತ್ಯಾದಿ ಡಿಟೇಲ್ಸ್ ಕೊಡ್ತೀವಿ ಅಂತಾ ಹೇಳ್ತಾರೆ.
ಬಳಿಕ ಪ್ರಭಾವತಿ ಮತ್ತು ಅವರ ಮಗಳು ಸೇರಿ ಮತ್ತೆ ಅವರಿಗೆ ಕಾಲ್ ಮಾಡ್ತಾರೆ. ಆ ಕಡೆಯವರು ಫೋನ್ ಎತ್ತಿ, ‘ಮೇಡಂ, ಮೊದಲು ನೀವು ಮೆಂಬರ್‌ಶಿಪ್‌ಗೆ ಇಷ್ಟು ಹಣ ಕಟ್ಟಬೇಕು’ ಎಂದು ಹೇಳಿದ ತಕ್ಷಣ ಟೀಚರ್ ಮತ್ತು ಅವರ ಮಗಳು ಒಟ್ಟು 2 ಲಕ್ಷ 39 ಸಾವಿರದ 500 ರೂ. ಪೇ ಮಾಡಿ ಕಾರಿಗೆ ಕಾಯತೊಡಗುತ್ತಾರೆ.
ಬಳಿಕ ಹಣ ಸಿಕ್ಕ ತಕ್ಷಣವೇ ವಂಚಕರ ಮೊಬೈಲ್ ಸ್ವಿಚ್ ಆಫ್ ಆಗಿ ಬಳಿಕ ತಾವು ಮೋಸಹೋಗಿದ್ದೇವೆ ಅಂತಾ ತಾಯಿ-ಮಗಳಿಗೆ ಮನವರಿಕೆಯಾಗುತ್ತದೆ. ಟೀಚರ್ ಅವರ ಎಸ್‌ಬಿಐ ಅಕೌಂಟಿನಿಂದ 2,35,000 ಮತ್ತು ಸೆಂಟ್ರಲ್ ಬ್ಯಾಂಕ್‌ನ ಅವರ ಮಗಳ ಅಕೌಂಟಿನಿಂದ 4,500 ರೂ. ವರ್ಗಾವಣೆ ಮಾಡಲಾಗಿದೆ. ಸದ್ಯ ಹಣ ಕಳೆದುಕೊಂಡು ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.