ಬೇಸಿಗೆ ಬಿಸಿ ತಪ್ಪಿಸಲು ಸಿಗ್ನಲ್ನಲ್ಲಿ ಟಾರ್ಪಲ್ ವ್ಯವಸ್ಥೆ: ಪೊಲೀಸ್ ಇಲಾಖೆ ಕಾರ್ಯಕ್ಕೆ ಜನರ ಸೆಲ್ಯೂಟ್ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಟ್ರಾಫಿಕ್ ಸಿಗ್ನಲ್ನಲ್ಲಿ ಟಾರ್ಪಲ್ ಅಳವಡಿಸುವ ಕೆಲಸ ಮಾಡಿದ್ದಾರೆ.
ಗದಗ: ಚಳಿಗಾಲ ಮೆಲ್ಲನೆ ಮರೆಯಾಗುತ್ತಿದ್ದು, ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ವಾಹನ ಸವಾರರಿಗೆ ಅನುಕೂಲ ಆಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. ಅವರು ಮಾಡಿರುವ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು, ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುತ್ತಿದ್ದ ವಾಹನ ಸವಾರರಿಗೆ ಹಸಿರು ನರ್ಸರಿ ಟಾರ್ಪಲ್ ಹಾಕಿ ನೆರಳು ಕಲ್ಪಿಸಿಕೊಡುವ ಹೊಸ ವ್ಯವಸ್ಥೆ ಮಾಡಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಬೇಸಿಗೆ ಕಾಲದಲ್ಲಿ ಈ ಭಾಗದಲ್ಲಿ ಹೊರಗೆ ಸಂಚರಿಸುವುದೇ ಬಹಳ ಕಷ್ಟವಾಗಿರುತ್ತದೆ. ಅದರಲ್ಲೂ ಸಿಗ್ನಲ್ನಲ್ಲಿ ಕೆಲವೊಂದಷ್ಟು ಹೊತ್ತು ನಿಲ್ಲುವುದೆಂದರೆ ಇನ್ನೂ ತ್ರಾಸದಾಯಕ ಕೆಲಸ. ಬಿಸಿಲಿನ ಬೇಗೆಯಲ್ಲಿ ಸಿಗ್ನಲ್ನಲ್ಲಿ ನಿಲ್ಲುವ ಕಿರಿಕಿರಿಯನ್ನು ತಪ್ಪಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.
ಟ್ರಾಫಿಕ್ ಕಿರಿಕಿರಿ ಮತ್ತು ಬಿಸಿಲಿನಿಂದ ಬೇಸತ್ತ ಜನರಿಗೆ ಇದರಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಸಿಗಲಿದೆ. ಎಷ್ಟೇ ಟ್ರಾಫಿಕ್ ಆದರೂ ಈ ಹಸಿರು ನರ್ಸರಿ ತಾರ್ಪಾಲಿನ್ ನೆರಳಿನಲ್ಲಿ ನಿಂತು ರಿಲ್ಯಾಕ್ಸ್ ಮಾಡಿ ಆ ಬಳಿಕ ಸವಾರ ತನ್ನ ಪ್ರಯಾಣವನ್ನು ಮುಂದುವರೆಸಬಹುದಾಗಿದೆ. 'ಗದಗ-ಬೆಟಗೇರಿ ನಗರಸಭೆಯ ಸಂಯೋಗದೊಂದಿಗೆ ಮುಳುಗುಂದ ನಾಕಾ ಟ್ರಾಫಿಕ್ ಸಿಗ್ನಲ್ನಲ್ಲಿ ವಾಹನ ಸವಾರರು ಎದುರಿಸುವ ಬಿಸಿಲು ಬೇಗೆಯನ್ನು ನಿವಾರಿಸಲು ಹಸಿರು ನರ್ಸರಿ ತಾರ್ಪಾಲಿನ್ ಅಳವಡಿಸಿ ನೆರಳು ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ವಾಹನ ಸವಾರರಿಗೆ ಅನುಕೂಲವಾಗಲಿದೆ' ಎಂದು ಅವರೇ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ಸಾವರ್ಜನಿಕರು, ವಾಹನ ಸವಾರರಿಂದ ಪ್ರಶಂಸೆ: ಸದ್ಯ ಅವರ ಈ ಮಾನವೀಯ ಕಾರ್ಯಕ್ಕೆ ವಾಹನ ಸವಾರರಿಂದ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಅವರ ಕಾರ್ಯ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.
ಗದಗ - ಬೆಟಗೇರಿ ನಗರಸಭೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರದಿಂದ ನಗರದ ಮುಳಗುಂದ ನಾಕಾದಲ್ಲಿ ಈ ನೂತನ ವ್ಯವಸ್ಥೆ ಮಾಡಲಾಗಿದೆ. ತುಂಬಾ ಒಳ್ಳೆಯ ಕೆಲಸ ಇದಾಗಿದೆ. ಸುಮಾರು ವರ್ಷಗಳಿಂದ ಸಾಕಷ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ, ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಸಾರ್ವಜನಿಕರು ಬಿಸಿಲಿನಲ್ಲಿ ಬೇಯುತ್ತಿರುವುದನ್ನು ಮನಗೊಂಡು ಈ ಉತ್ತಮ ಕಾರ್ಯ ಮಾಡಿದ್ದು ನಿಜಕ್ಕೂ ಪ್ರಶಂಸನೀಯ ಎಂಬೆಲ್ಲ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಐಷಾರಾಮಿ ಕಾರುಗಳಲ್ಲಿ ಓಡಾಡಿ ಮಜಾ ಮಾಡುವ ಅಧಿಕಾರಿಗಳ ಮಧ್ಯೆ ಇಂತಹ ಮಾನವೀಯ ಮೌಲ್ಯಗಳನ್ನೊಳಗೊಂಡ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ ಎಂಬುದು ನಮಗೆ ಸಂತೋಷವನ್ನುಂಟು ಮಾಡಿದೆ. ಇಂತಹ ಜನಪರ ಕೆಲಸ ಮಾಡುತ್ತಿರುವ ನಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೆಲ್ಯೂಟ್ ಎನ್ನುತ್ತಿದ್ದಾರೆ ಸಾರ್ವಜನಿಕರು.
ಇದನ್ನೂ ಓದಿ: ಬಿಸಿಲು ನಾಡು ರಾಯಚೂರಿನಲ್ಲಿ ಗುಡುಗು ಸಹಿತ ಅಲಿಕಲ್ಲು ಮಳೆ