ಗದಗ: ನಗರದ ಬೆಟಗೇರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ತಾರಾಲಯವನ್ನು ಶಾಸಕ ಹೆಚ್.ಕೆ.ಪಾಟೀಲ್ ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಟಗೇರಿಯಲ್ಲಿ ತಾರಾಲಯ ನಿರ್ಮಾಣದಲ್ಲಿ ಸಿದ್ದರಾಮಯ್ಯ ಕೊಡುಗೆ ಅಪಾರ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು. ಸಿದ್ದರಾಮಯ್ಯನವರ ಹೆಸರನ್ನು ಮಾತ್ರ ಪ್ರಸ್ತಾಪಿಸಿ ಭಾಷಣ ಮಾಡಿದ್ದಕ್ಕೆ ಹೆಚ್.ಕೆ.ಪಾಟೀಲ್ ವಿರುದ್ಧ ಬಿಜೆಪಿಯ ಪರಿಷತ್ ಸದಸ್ಯ ವಿ.ಎಸ್.ಸಂಕನೂರ ಕಿಡಿಕಾರಿದರು.
ಸಂಕನೂರ ಅಸಮಾಧಾನವೇನು?: ಕೇವಲ ಸಿದ್ದರಾಮಯ್ಯನವರ ಕಾಲದಲ್ಲಿ ಅನುದಾನ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿಯೂ ಅನುದಾನ ನೀಡಲಾಗಿದೆ. ಹೀಗಾಗಿ ನಮ್ಮ ಸರ್ಕಾರದ ಸಚಿವರ ಬಗ್ಗೆ ಮಾತನಾಡಬೇಕಿತ್ತು. ಸ್ಥಳೀಯ ಸಚಿವರು ಸಿ.ಸಿ.ಪಾಟೀಲ್, ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು ಎಂದರು. ಶಾಸಕರು ತರಾತುರಿಯಲ್ಲಿ ತಾರಾಲಯ ಉದ್ಘಾಟಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಸಂಕನೂರ, ಕೇವಲ ತಮ್ಮ ಪಕ್ಷಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ಉದ್ದೇಶದಿಂದ ಈ ರೀತಿ ವರ್ತಿಸಿದ್ದಾರೆ. ಈಗ ಚುನಾವಣೆ ಬಂದಿದೆ. ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ 7 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೇವಲ 1 ಕೋಟಿ ರೂ. ಕೊಟ್ಟಿದ್ದಾರೆ. ತಾರಾಲಯ ನಿರ್ಮಾಣಕ್ಕೆ ನಮ್ಮ ಸರ್ಕಾರವೇ ಹೆಚ್ಚು ಅನುದಾನ ನೀಡಿದೆ. ಆದರೆ ಹೆಚ್.ಕೆ.ಪಾಟೀಲ್ ಹಿರಿಯರು, ಅನುಭವ ಉಳ್ಳವರು ಈ ರೀತಿ ರಾಜಕೀಯ ಮಾಡಿದ್ದು ಸರಿಯಲ್ಲ. ಉನ್ನತ ಸಚಿವ ಅಶ್ವತ್ಥ ನಾರಾಯಣ ಅವರಿಗೂ ಆಹ್ವಾನ ನೀಡಿಲ್ಲ. ಇದನ್ನು ಖಂಡಿಸುತ್ತೇನೆ ಎಂದರು.
ಕಾರ್ಯಕ್ರಮದ ಬಳಿಕ ಹೆಚ್.ಕೆ.ಪಾಟೀಲ್ ಅವರಿಗೆ ನಾನು ಪ್ರಶ್ನಿಸಿದೆ. ಸಿದ್ದರಾಮಯ್ಯರಿಗೆ ಧನ್ಯವಾದ ಹೇಳಿದ್ರಿ. ಆದರೆ ಸಚಿವ ಅಶ್ವತ್ಥ ನಾರಾಯಣ ಅವರ ಹೆಸರನ್ನೇಕೆ ಹೇಳಲಿಲ್ಲ ಎಂದು ಕೇಳಿದೆ. ಆದರೆ ಅವರು ಅಶ್ವತ್ಥ ನಾರಾಯಣ ಅವರ ಹೆಸರನ್ನು ಯಾಕೆ ಪ್ರಸ್ತಾಪ ಮಾಡಬೇಕು ಎಂದು ನನ್ನನ್ನೇ ಮರು ಪ್ರಶ್ನಿಸಿದರು. ಅಲ್ಲದೇ ಅವರು ಒಂದು ಪೈಸೆ ಸಹ ಕೊಟ್ಟಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯನವರ ಅವಧಿಯಲ್ಲಿ ಕೇವಲ ಮೂರು ಕೋಟಿ ರೂ. ಯೋಜನೆ ರೂಪಿಸಿದ್ದರು. ಆದ್ರೆ ಈಗ 8 ಕೋಟಿ ರೂ.ಪ್ರಾಜೆಕ್ಟ್ ಆಗಿದೆ. ಈ ಹಣ ಕೊಟ್ಟವರು ಯಾರು ಎಂದು ಕೇಳಿದೆ. ಹೆಚ್.ಕೆ.ಪಾಟೀಲ್ ಅವರಿಗೆ ತಿಳುವಳಿಕೆ ಇಲ್ವಾ? ಇಂಥವರು ತಪ್ಪು ಮಾಡಿದ್ದು ನೋವಾಗಿದೆ. ಸುಳ್ಳು ಸುಳ್ಳು ಹೇಳಿ ಕ್ರೆಡಿಟ್ ತೆಗೆದುಕೊಳ್ಳುವುದನ್ನು ಬಿಡಿ ಎಂದು ಕಿಡಿಕಾರಿದರು.
ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಸಹ ನಿಯಮ ಉಲ್ಲಂಘನೆ ಮಾಡಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿದು ಸರ್ಕಾರದ ಸಚಿವರನ್ನು ಕೈಬಿಟ್ಟು ಉದ್ಘಾಟನೆ ಮಾಡಿದ್ದಾರೆ. ಇದನ್ನು ನಾನು ಸರ್ಕಾರ ಮತ್ತು ಸಚಿವರ ಗಮನಕ್ಕೆ ತರುತ್ತೇನೆ. ಸಿಎಂ ಅವರನ್ನು ಕರೆಸಿ ತಾರಾಲಯ ಮತ್ತು ಪಿಜಿ ಸೆಂಟರ್ ಉದ್ಘಾಟನೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಬಿಜೆಪಿಯವರನ್ನು ಹೈಜಾಕ್ ಮಾಡಿ ಹೆಚ್.ಕೆ.ಪಾಟೀಲ್ ಅವರು ರಾಜಕೀಯ ಲಾಭ ಮಾಡಿಕೊಳ್ಳಲು ಹೋಗಿರುವುದು ದುರ್ದೈವ ಎಂದು ಸಂಕನೂರ ಹರಿಹಾಯ್ದರು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ