ಗದಗ: ಇತ್ತೀಚೆಗೆ 80 ವರ್ಷದ ವೃದ್ಧೆ ಕೊರೊನಾ ಸೋಂಕಿಗೆ ಬಲಿಯಾದ ಹಿನ್ನೆಲೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ನಗರದ ರಂಗನವಾಡಿ ಪ್ರದೇಶದಲ್ಲಿ ತೀವ್ರ ನಿಗಾ ಇಡಲಾಗಿದ್ದು, ಬೇಕಾಬಿಟ್ಟಿಯಾಗಿ ಓಡಾಡುವವರ ಮೇಲೆ ಕಣ್ಣಿಡಲು ಪೊಲೀಸರು ಡ್ರೋಣ್ ಕ್ಯಾಮರಾದ ಮೊರೆ ಹೋಗಿದ್ದಾರೆ.
ಎಪ್ರಿಲ್ 2 ರಂದು ರಂಗನವಾಡಿ ಪ್ರದೇಶದ ವೃದ್ಧೆಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಎರಡು ದಿನದ ಬಳಿಕ ಆಕೆ ಮೃತಪಟ್ಟಿದ್ದಳು. ಈಗಾಗಲೇ ವೃದ್ಧೆಯ ಸಂಪರ್ಕದಲ್ಲಿದ್ದ ಸುಮಾರು 60 ಕ್ಕೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿಗಳು ನೆಗೆಟಿವ್ ಬಂದಿದೆ. ಆದರೆ, ವೃದ್ಧೆಗೆ ಸೋಂಕು ತಗುಲಿರುವ ಮೂಲ ಇನ್ನೂ ಪತ್ತೆಯಾಗದಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.