ಗದಗ: ನಾಳೆಯಿಂದ 9 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಸರ್ಕಾರದ ನಿಯಮಾವಳಿಗಳನ್ನು ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕೂಡಲೇ ಗಣೇಶ ಹಬ್ಬದ ಮಾರ್ಗಸೂಚಿಗಳ ಪರಿಷ್ಕರಣೆ ಆಗಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ 5 ದಿನದ ಬದಲು ಜಿಲ್ಲೆಯಾದ್ಯಂತ 9 ಆಚರಿಸಲು ಶ್ರೀರಾಮಸೇನೆ ನಿರ್ಧಾರ ಮಾಡಲಾಗಿದೆ. ಇದಕ್ಕೆ ಸರ್ಕಾರ ಸಹಕಾರ ನೀಡಬೇಕು. ಜೊತೆಗೆ ಶಾಲಾ-ಕಾಲೇಜುಗಳಲ್ಲೂ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ನಮ್ಮ ಬೇಡಿಕೆ ಈಡೇರದಿದ್ರೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘಟಕರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ನೀವು ಗಣೇಶ ಉತ್ಸವ ಆಚರಣೆಗೆ ಅಡೆತಡೆ ಮಾಡಿ ನಿಮ್ಮ ಲಾಠಿ ಏಟು ಹಾಗೂ ಬಂದೂಕಿನ ಗುಂಡಿಗೂ ಹೆದರುವುದಿಲ್ಲ. ನಿಮ್ಮ ಗುಂಡಿಗೆ ನಮ್ಮ ಎದೆ ಗುಂಡಿಗೆ ಒಡ್ಡಲು ಸಿದ್ಧರಿದ್ದೇವೆ. ಯಾವುದಕ್ಕೂ ಬಗ್ಗುವ ಜಗ್ಗುವ ಮಾತೇ ಇಲ್ಲ. ತಾಕತ್ ಇದ್ರೆ ಆಚರಣೆ ತಡೆಯಲಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.
ಶ್ರೀರಾಮಸೇನೆ ಧಾರವಾಡ ವಿಭಾಗದ ಸಂಚಾಲಕ ರಾಜು ಖಾನಪ್ಪನವರ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಅನೇಕ ಕಾರ್ಯಕರ್ತರು ಈ ಧರಣಿಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.