ಗದಗ: ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಣಕೊಪ್ಪ, ನಾಗರಾಳ ಗ್ರಾಮದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ಮಾರುಕಟ್ಟೆಗೆ ಸಾಗಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಂದೂವರೆ ಎಕರೆ ಜಮೀನಿನಲ್ಲಿ ಗಜ್ಜರಿ ಬೆಳೆದಿದ್ದು, ಅದಕ್ಕೆ ಸುಮಾರು ₹ 80 ಸಾವಿರ ಖರ್ಚು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ ಬೆಳೆಗೆ ವ್ಯಯಿಸಿದ್ದ ಖರ್ಚು ಸಹ ಸಿಗದಾಗಿದೆ ಎಂದು ಬೆಣಕೊಪ್ಪ ಗ್ರಾಮದ ರೈತ ಪ್ರಕಾಶ್ ಬಿಂಗಿ ಅಳಲು ತೋಡಿಕೊಂಡರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗಜ್ಜರಿಗೆ (ಕ್ಯಾರೇಟ್) ಕೇವಲ ₹ 300-400ಕ್ಕೆ ಕೇಳುತ್ತಾರೆ. ಲಾಕ್ಡೌನ್ ಇಲ್ಲದಿದ್ದರೆ, ಕ್ವಿಂಟಾಲ್ ₹ 3000-4000 ಇರುತ್ತಿತ್ತು. ಸುಮಾರು ₹ 2 ಲಕ್ಷವರೆಗೂ ಲಾಭ ಬರುತಿತ್ತು. ಆದರೆ, ಈಗ ಬಂದ ಬೆಳೆ ದಲ್ಲಾಳಿಗಳಿಗೆ, ವ್ಯಾಪಾರಿಗಳಿಗೆ ಲಾಭ ತಂದುಕೊಡುತ್ತಿದೆ. ಹೀಗಾಗಿ ನಾವು ನಷ್ಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ರೈತ ಪ್ರಕಾಶ್ ಬಿಂಗಿ.