ಗದಗ : ಇಡೀ ಪ್ರಪಂಚಕ್ಕೆ ಕಂಟಕವಾಗಿರುವ ಕೊರೊನಾ ವೈರಸ್ ಸೋಂಕು ಜಿಲ್ಲೆಯ ಕುಟುಂಬವೊಂದಕ್ಕೆ ವರವಾಗಿದೆ. ಯಾಕೆಂದರೆ, 22 ವರ್ಷಗಳ ಹಿಂದೆ ಕಳೆದುಹೋಗಿದ್ದ ಮಗ ಇದೀಗ ಮರಳಿ ತನ್ನ ಮನೆಗೆ ಬಂದಿದ್ದಾನೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದ ಮಲಿಕ್‌ಸಾಬ್ ಭಾಗವಾನ್ ಎಂಬವರ ಮೂರನೇ ಮಗ ಆದಂ ಮಲಿಕ್‌ಸಾಬ್ ಭಾಗವಾನ್ ಮರಳಿ ಮನೆಗೆ ಬಂದಿರುವ ವ್ಯಕ್ತಿ. ಈತ ಮಹಾರಾಷ್ಟ್ರದ ಸೊಲ್ಲಾಪುರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದನಂತೆ.
ಕೊರೊನಾ ಹಾವಳಿಗೆ ತುತ್ತಾಗಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡಿದ್ದ ಆದಂ ಬಳಿಕ ಕೆಲಸವಿಲ್ಲದೇ ಅಲೆದಾಡುತ್ತಿದ್ದ. ಹೀಗೆ ಹಲವು ರೀತಿಯ ಕಷ್ಟಗಳನ್ನು ಅನುಭವಿಸಿ ಬಳಿಕ ಮನೆ ಮಂದಿ, ಅಪ್ಪ, ಅಮ್ಮ ನೆನಪಾಗಿದ್ದು ಊರಿಗೆ ತೆರಳುವ ಮನಸ್ಸು ಮಾಡಿದ್ದಾನೆ. ಎರಡು ದಶಕಗಳ ಬಳಿಕ ಬಂದ ಮಗನನ್ನು ನೋಡಿದ ತಂದೆ-ತಾಯಿ ಮೊಗದಲ್ಲೀಗ ಖುಷಿ ಕಾಣುತ್ತಿದೆ.
ಮಲಿಕ್‌ಸಾಬ್ ಹಾಗೂ ಬಡಿಮಾ ದಂಪತಿಗೆ ಒಟ್ಟು ನಾಲ್ವರು ಪುತ್ರರಿದ್ದು, ಆರು ಜನ ಪುತ್ರಿಯರಿದ್ದಾರೆ. ಬಡತನವಿದ್ದಿದ್ದರಿಂದ ಆದಂ ಹೈಸ್ಕೂಲ್ ಮುಗಿಸಿದ ನಂತರ ಅಣ್ಣನೊಂದಿಗೆ ಪುಣೆಗೆ ದುಡಿಯಲು ಹೋಗಿದ್ದಾನೆ. ಅಲ್ಲಿ ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ 1998ರಲ್ಲಿ ಗೆಳೆಯರೊಂದಿಗೆ ಮುಂಬೈಗೆ ಪ್ರವಾಸಕ್ಕೆ ಹೋದಾಗ ಕಾಣೆಯಾಗಿದ್ದಾನೆ. ಈ ವಿಷಯ ತಿಳಿದ ಮನೆಯವರು 5-6 ವರ್ಷಗಳ ಕಾಲ ಮುಂಬೈ, ಪುಣೆ ಸೇರಿದಂತೆ ಎಲ್ಲಾ ಕಡೆ ಸಾಕಷ್ಟು ಹುಡುಕಾಡಿದ್ದಾರೆ. ಸಿಕ್ಕ ಸಿಕ್ಕ ದೇವರಿಗೆ ಹರಕೆಯನ್ನೂ ಹೊತ್ತಿದ್ದಾರೆ. ಕೊನೆಗೂ ಮಗ ಮಾತ್ರ ಎಲ್ಲಿಯೂ ಸಿಕ್ಕಿರಲಿಲ್ಲ. ಅಂದಿನಿಂದ ಇಂದಿನವರೆಗೂ ತಾಯಿ ಬಡಿಮಾ ಮಗನ ಬರುವಿಕೆಗಾಗಿಯೇ ಕಾಯುತ್ತಿದ್ದರು.
ಕಳೆದ ಆರು ತಿಂಗಳ ಹಿಂದೆ ಜಮೀನು ಹಂಚಿಕೆ ವೇಳೆ ತಾಯಿ ಬಡಿಮಾ ಆದಂ ಬರ್ತಾನೆ. ಅವನಿಗೂ ಆಸ್ತಿಯಲ್ಲಿ ಪಾಲು ಕೊಡಬೇಕು ಎಂದಿದ್ದರಂತೆ. ಆ ಮಾತು ಈಗ ನಿಜವಾಗಿದೆ ಅಂತಿದ್ದಾರೆ ಕುಟುಂಬಸ್ಥರು.
ಆದಂ ಚಿಕ್ಕವನಿದ್ದಾಗ ಕಾಮಾಲೆ ರೋಗ ಬಾಧಿಸಿದಾಗ ಕೈಗಳಿಗೆ ಬಳ್ಳಿ ಹಾಕಿಸಿದ್ದ ಸುಟ್ಟ ಕಲೆಗಳು ಹಾಗೂ ಬಲಗಾಲಿನ ಒಂದು ಬೆರಳು ಮೇಲಿರುವುದು ಮನೆಗೆ ಬಂದ ಮಗನನ್ನು ಗುರುತಿಸಲು ಸಹಕಾರಿಯಾದವು. ಊರಿಗೆ ಬಂದ ಆದಂ ಮೊದಲು ವಾಸವಿದ್ದ ಮನೆಗೆ ಬಂದ ಈ ವ್ಯಕ್ತಿ ಅಲ್ಲಿರುವ ಗ್ರಾಮಸ್ಥರನ್ನು ವಿಚಾರಿಸಿದ್ದಾನೆ. ನಂತರ ಅವರ ಅಣ್ಣನಿಗೆ ವಿಷಯ ತಿಳಿದು ಆದಂ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಆತ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾನೆ. ಸದ್ಯ ಆದಂ ಮನೆಗೆ ಬಂದಿರುವುದು ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿದೆ. ಆತನಿಗಿನ್ನೂ ಮದುವೆಯಾಗಿಲ್ಲ. ಹುಡುಗಿ ನೋಡಿ ಮದುವೆ ಮಾಡಬೇಕು ಎಂದುಕೊಂಡಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು. ಒಟ್ಟಿನಲ್ಲಿ ಕೊರೊನಾ ಇಡೀ ಜಗತ್ತಿಗೆ ಕೆಡುಕಾಗಿದ್ದರೆ ಇವರ ಪಾಲಿಗೆ ಮಾತ್ರ ವರವಾಗಿದೆ ಅಂತಿದ್ದಾರೆ ಇಲ್ಲಿನ ಜನರು!.