ಗದಗ: ಯೋಧನೊಬ್ಬ ತನ್ನದಲ್ಲದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಜಾಗದ ವಾರಸುದಾರರ ಮೇಲೆ ಧಮ್ಕಿ ಹಾಕಿದ ಆರೋಪ ಎದುರಿಸುತ್ತಿದ್ದಾನೆ.
ಹಾತಲಗೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಯೋಧರನ್ನು ಹೊಂದಿರುವ ಗ್ರಾಮ. ಇಲ್ಲಿಯ ಪ್ರತಿ ಮನೆಯಲ್ಲಿಯೂ ಒಬ್ಬ ಸೈನಿಕನಿದ್ದಾನೆ. ಈ ಊರಿನಲ್ಲಿ ಯೋಧರಿಗೆ ಹೆಚ್ಚು ಗೌರವವಿದೆ. ಇದೇ ಊರಲ್ಲಿ ಯೋಧನೊಬ್ಬ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ ಆರೋಪ ಎದುರಿಸುತ್ತಿದ್ದಾನೆ.
ಕೇಶಪ್ಪ ಹಣಮಪ್ಪ ಮೇಲ್ಮನಿ ಎಂಬ ಸಿಆರ್ಪಿಎಫ್ ಯೋಧ ಕಳೆದ 9 ತಿಂಗಳಿನಿಂದ ಕೆಲಸಕ್ಕೆ ಹಾಜರಾಗದೆ ಊರಲ್ಲಿಯೇ ಉಳಿದಿದ್ದಾನೆ. ಊರಿನಲ್ಲಿ ಉಳಿದ ಈತ ತನ್ನಷ್ಟಕ್ಕೆ ತಾನಿರದೆ ಗ್ರಾಮದ ಸಿದ್ದಪ್ಪ ಮುರ್ಲಾಪುರ್ ಎಂಬುವರಿಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾನಂತೆ.
ಮೂಲ ಜಾಗದ ಮಾಲೀಕ ತನ್ನ ಹೆಸರಿನ ದಾಖಲೆ ತೋರಿಸಿ ಮನೆ ಕಟ್ಟಬೇಡಿ, ಅದನ್ನು ತೆರವುಗೊಳಿಸಿ ಎಂದು ಹೇಳಿದ್ದಾರೆ. ಈ ವೇಳೆ ಅವರ ಮೇಲೆಯೇ ಧಮ್ಕಿ ಹಾಕಿ, ಆತನ ಮೇಲೆ ಹಲ್ಲೆಗೂ ಯತ್ನಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಇವರಷ್ಟೇ ಅಲ್ಲದೆ, ಗ್ರಾಮದ ಪಾಂಡಪ್ಪ ಮೇಲ್ಮನಿ ಅವರಿಗೆ ಸೇರಿದ ಜಾಗವನ್ನೂ ಸಹ ಒತ್ತುವರಿ ಮಾಡಿರುವ ಆರೋಪ ಈತನ ಮೇಲಿದೆ. ಜೊತೆಗೆ ಗ್ರಾಮ ಪಂಚಾಯತಿಗೆ ಸೇರಿದ ಜಾಗವನ್ನೂ ಅತಿಕ್ರಮಣ ಮಾಡಿರುವ ಆರೋಪವಿದೆ.
ಮೂಲ ಜಾಗ ಸಿದ್ದಪ್ಪ ಮುರ್ಲಾಪುರ್ ಅವರ ತಂದೆ ಮತ್ತು ದೊಡ್ಡಪ್ಪನ ಹೆಸರಿನಲ್ಲಿದೆ. ಆದರೆ ಯೋಧ ಕೇಶಪ್ಪ ಮಾತ್ರ ದಾಖಲೆಗಳಿಲ್ಲದೆ ಅದು ನಮ್ಮ ತಾತನ ಹೆಸರಿನ ಜಾಗ ಎಂದು ವಾದಿಸುತ್ತಿದ್ದಾನೆ. ಇತ್ತ ಪೊಲೀಸರಿಗೆ ದೂರು ನೀಡಿದರೂ ಕೇಸ್ ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ನ್ಯಾಯಯುತವಾಗಿ ನನಗೆ ಸೇರಬೇಕಾದ ಜಾಗ ಬಿಟ್ಟು ಕೊಡದೇ ಈ ರೀತಿ ಧಮ್ಕಿ ಹಾಕ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಿದ್ದಪ್ಪ ಆರೋಪಿಸಿದ್ದಾನೆ.
ಈ ಸಂಬಂಧ ಈಗಾಗಲೇ ಗ್ರಾಮ ಪಂಚಾಯತಿ ಸಿಬ್ಬಂದಿ ನೋಟಿಸ್ ನೀಡಿದ್ದಾರೆ. ನಿಮ್ಮ ಹೆಸರಿನ ದಾಖಲೆಗಳನ್ನು ಒದಗಿಸಿ ಇಲ್ಲದಿದ್ದರೆ ಮನೆ ತೆರವುಗೊಳಿಸಿ ಎಂದು ತಿಳಿಸಿದ್ದಾರೆ. ಆದರೂ ಮನೆ ಕೆಲಸ ಪೂರ್ಣಗೊಳಿಸುತ್ತಿದ್ದಾನೆ ಎಂದು ಪಿಡಿಓ ತಿಳಿಸಿದ್ದಾರೆ.