ಗದಗ: ದಾರಿ ತಪ್ಪಿ ದೆಹಲಿ ತಲುಪಿದ್ದ ಎಪ್ಪತ್ತು ವರ್ಷದ ವೃದ್ಧೆಯನ್ನು, ಗದಗಿನ ಯೋಧರೊಬ್ಬರು ಸ್ವಗ್ರಾಮಕ್ಕೆ ಮರಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಓದಿ: ಟಫ್ ರೂಲ್ಸ್ ನಾಳೆಯಿಂದ ಜಾರಿ: ಸರ್ವಪಕ್ಷಗಳ ಸಭೆ ಬಳಿಕ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಬಾಗಲಜೋಟೆ ಜಿಲ್ಲೆ ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ ಶಿವಮ್ಮ ಪಾಟೀಲ ಎಂಬ ವೃದ್ಧೆ ಮೊಮ್ಮಗನ ಜೊತೆ ತಿರುಪತಿ ದರ್ಶನಕ್ಕೆ ತೆರಳಿದ್ದರು. ಮರಳಿ ಊರಿಗೆ ಬರುವಾಗ ಮೊಮ್ಮಗನಿಂದ ಬೇರ್ಪಟ್ಟು ಬೇರೆ ಕಡೆ ತೆರಳಿ ತಿರುಪತಿಯಲ್ಲಿ ಪರದಾಡಿದ್ದಾರೆ.
ಬಳಿಕ ತಿರುಪತಿ ರೈಲು ನಿಲ್ದಾಣದಲ್ಲಿ ತನ್ನ ಊರಿನತ್ತ ಬರುವ ರೈಲು ಹತ್ತುವ ಬದಲು ಬೇರೆ ರೈಲು ಹತ್ತಿ ದೆಹಲಿ ತಲುಪಿದ್ದಾರೆ. ಅಲ್ಲಿ ಯಾರಿಗೂ ತನ್ನ ಕನ್ನಡ ಭಾಷೆ ಗೊತ್ತಿಲ್ಲ. ಕಂಡ ಕಂಡವರಿಗೆ ಕೈ ಮುಗಿದು ಕಣ್ಣೀರು ಹಾಕುತ್ತ ನನ್ನ ಊರಿಗೆ ತಲುಪಿಸಿ ಅಂತ ಗೋಗರೆದಿದ್ದಾರೆ. ಆದರೆ, ಆಕೆಯ ಕನ್ನಡ ಭಾಷೆ ಅಲ್ಲಿದ್ದವರಿಗೆ ಯಾರಿಗೂ ಅರ್ಥವಾಗಿಲ್ಲ.
ಕೊನೆಗೆ ಅಜ್ಜಿಯ ಅಲೆದಾಟ ಪರದಾಟವನ್ನ ಕನ್ನಡದ ಯೋಧರೊಬ್ಬರು ಗಮನಿಸಿ ವಿಚಾರಿಸಿದ್ದಾರೆ. ತಕ್ಷಣ ಕನ್ನಡ ಮಾತನಾಡಿದ ಯೋಧನನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ತನ್ನ ಕಷ್ಟವನ್ನೆಲ್ಲ ಯೋಧನ ಮುಂದೆ ಹೇಳಿಕೊಂಡಿದ್ದಾಳೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಸೈನಿಕ ಮುದಕಯ್ಯ ಹಿರೇಮಠ ಎಂಬುವರು ಪಂಜಾಬ್ ಬೆಟಾಲಿಯನ್ 174 ಮಿಲಿಟರಿ ಹಾಸ್ಪಿಟಲ್ ಪಟೇಂಡಾದಲ್ಲಿ 2 ವರ್ಷದಿಂದ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆ ಮೇಲೆ ತನ್ನ ಪತ್ನಿಯೊಂದಿಗೆ ಪಂಜಾಬ್ನಿಂದ ದೆಹಲಿ ಮೂಲಕ ಸ್ವಗ್ರಾಮ ಕದಾಂಪುರಕ್ಕೆ ಬರುತ್ತಿದ್ದರು.
ಈ ವೇಳೆ ಇಳಕಲ್ ಸೀರೆ, ಕುಸಗಲ್ ಕುಬುಸ ಹಾಕಿದ್ದ ಸುಮಾರು 70 ರ ಆಸುಪಾಸಿನ ವೃದ್ಧೆ, ದೆಹಲಿ ನ್ಯೂ ರೈಲ್ವೆ ಸ್ಟೇಷನ್ ನಲ್ಲಿ ತನ್ನ ಊರಿಗೆ ಹೋಗುವ ರೈಲಿನ ಬಗ್ಗೆ ಅಲ್ಲಿದ್ದ ಜನರನ್ನ ವಿಚಾರಿಸುತ್ತಿದ್ದರು. ಇದನ್ನ ಗಮನಿಸಿದ ಯೋಧ ಮುದಕಯ್ಯ ಅಜ್ಜಿಯನ್ನ ವಿಚಾರಿಸಿದಾಗ ಪಕ್ಕದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ ನಿವಾಸಿ ಅಂತ ಗೊತ್ತಾಗಿದೆ.
ತಕ್ಷಣ ಯೋಧ ಮುದಕಯ್ಯ ವಿಜಯಪುರದ ಸಿಂಧಗಿಯಲ್ಲಿರುವ ತನ್ನ ಗೆಳೆಯನಿಗೆ ಕರೆ ಮಾಡಿ ವೃದ್ದೆ ಹಾದಿ ತಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೃದ್ಧೆಯ ಬಗ್ಗೆ ವಿಚಾರಿಸಿದಾಗ ಸಿಂದಗಿಯ ಗೆಳೆಯನ ಸಂಬಂಧಿಕರಿಂದ ವೃದ್ಧೆಯ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ಬಳಿಕ ದೆಹಲಿಯಿಂದ ಬಾಗಲಕೋಟೆಯವರೆಗೆ ಯೋಧ ವೃದ್ಧೆಯನ್ನ ಕರೆತಂದು ಅವರ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಇದರಿಂದ ವೃದ್ಧೆ ಮತ್ತು ಅವರ ಸಂಬಂಧಿಕರು ಬಹಳಷ್ಟು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಯೋಧನ ಕಾರ್ಯಕ್ಕೆ ಗದಗ ಮತ್ತು ಬಾಗಲಕೋಟೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.