ಗದಗ: ಜಿಲ್ಲೆ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಾಣಕ್ಕೆ 6 ದಶಕಗಳ ಹಿಂದೆ ದಾನಿಯೊಬ್ಬರು ಭೂಮಿ ದಾನ ಮಾಡಿದ್ರು. ಆದ್ರೆ ಅವರ ಮಗ ಇದೀಗ ದಾನ ನೀಡಿದ ಜಮೀನಿಗೆ ಪರಿಹಾರ ಕೊಡಬೇಕೆಂದು ತಕರಾರು ತೆಗೆದಿದ್ದಾರೆ.
ಇದೇ ಕಾರಣಕ್ಕೆ ಶಾಲೆಯಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ತಗಾದೆ ತೆಗೆದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆರು ದಶಕಗಳ ಹಿಂದೆ ಗ್ರಾಮಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಆಗ ಗ್ರಾಮದ ಪ್ರಮುಖರಾಗಿದ್ದ ಅಂದಾನಪ್ಪ ವೀರಪ್ಪ ಕವಲೂರ ಎಂಬುವರು ಶಾಲೆಗೆ 20 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದರು. ಆದರೆ, ಅಂದಾನಪ್ಪ ಅವರು ಭೂಮಿ ದಾನ ನೀಡಿರುವ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆದಿಲ್ಲ.
ಕೇವಲ ಮೌಖಿಕ ಒಪ್ಪಿಗೆ ಮೇರೆಗೆ ಸರ್ಕಾರದಿಂದ ವಿವಿಧ ಹಂತದಲ್ಲಿ ಒಟ್ಟು 10 ಕೊಠಡಿಗಳು ತಲೆ ಎತ್ತಿವೆ. ಆದರೆ, ಶಾಲೆಗೆ ಜಮೀನು ಕಾನೂನಾತ್ಮಕವಾಗಿ ಹಸ್ತಾಂತರವಾಗಿಲ್ಲ ಎಂಬುದನ್ನು ಅರಿತಿರುವ ದಾನಿಗಳ ವಾರಸುದಾರರು ಭೂಮಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪರಿಹಾರ ನೀಡುವವರಿಗೆ ಹೊಸದಾಗಿ ಮಂಜೂರಾಗಿರುವ ಮೂರು ಕೊಠಡಿಗಳ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲವೆಂದು ಅಂದಾನಪ್ಪ ಅವರ ಪುತ್ರ ಶರಣಪ್ಪ ಎ.ಕವಲೂರ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಶಾಲೆಯ ಜಮೀನು ವಿವಾದದ ರೂಪ ಪಡೆದಿದೆ. ವಿವಾದ ಹಿನ್ನೆಲೆ ನೂತನ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿದ್ದು ಮುರುಕಲು ಶಾಲಾ ಕೊಠಡಿಯಲ್ಲಿಯೇ ಮಕ್ಕಳ ಕಲಿಕೆ ಮುಂದುವರೆದಿದೆ.
ಇದೇ ಗ್ರಾಮದಲ್ಲಿ ನಿನ್ನೆ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ಅವರು ಗ್ರಾಮ ವಾಸ್ತವ್ಯ ಹೂಡಿದ್ದರು. ಈ ವೇಳೆ ಭೂದಾನ ಮಾಡಿದ ಮಾಲೀಕರ ಜೊತೆಗೆ ಕುಳಿತು ಮಾತನಾಡಿದರೆ ಸಮಸ್ಯೆ ಬಗೆಹರಿಸುವುದಾದರೆ ಖಂಡಿತ ಪ್ರಯತ್ನ ಮಾಡುತ್ತೇನೆ ಅಂತಾ ತಿಳಿಸಿದರು.
ಒಟ್ಟಿನಲ್ಲಿ ಇಷ್ಟು ದಿನ ಯಾವುದೇ ತಕರಾರು ಮಾಡದೇ ಈಗ ಹೊಸ ಕಟ್ಟಡ ಕಟ್ತಿದ್ದಾರೆ ಅನ್ನೋವಷ್ಟರಲ್ಲಿ ದತ್ತುಪುತ್ರ ತಕರಾರು ತೆಗೆದಿದ್ದಾರೆ. ಮಕ್ಕಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಿದೆ.