ಗದಗ : ಸ್ವಾತಂತ್ರ್ಯ ಹೋರಾಟಗಾರರ ಜಾಗೃತಿಗಾಗಿ ದೇಶ ಪರ್ಯಟನೆಯಲ್ಲಿ ತೊಡಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಗದಗ ನಗರಕ್ಕೂ ಭೇಟಿ ನೀಡಿದ್ದರು. 1920ರಲ್ಲಿ ಬಾಪೂಜಿಯವರು ನಗರಕ್ಕೆ ಭೇಟಿ ಕೊಟ್ಟಿರೋದು ಅವಿಸ್ಮರಣೀಯವಾಗಿ ಉಳಿದಿದೆ.
ಈ ಭೇಟಿ ನವೆಂಬರ್ 11ಕ್ಕೆ 100 ವರ್ಷ ತುಂಬಲಿದೆ. ಈ ನೂರು ವರ್ಷಗಳ ಸವಿನೆನಪಿಗಾಗಿ ನಗರದಲ್ಲಿ ಅವರ ಜೀವನ ಸಂದೇಶ ಸಾರುವ ಸಾಬರಮತಿ ಆಶ್ರಮ ನಿರ್ಮಾಣ ಮಾಡಲಾಗಿದೆ.
ದೇಶದ ಸ್ವಾತಂತ್ರ್ಯ ಚಳವಳಿ ಭಾಗವಾಗಿ ಮಹಾತ್ಮ ಗಾಂಧೀಜಿ ಅವರು ಗದುಗಿಗೆ ಭೇಟಿ ನೀಡಿದ್ದ ಸಂದರ್ಭಕ್ಕೆ ಈಗ ಶತಮಾನದ ಸಂಭ್ರಮ. ಅದರ ಸ್ಮರಣಾರ್ಥವಾಗಿ ಇಲ್ಲಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ನಾಳೆಗೆ ಈ ಸಾಬರಮತಿ ಆಶ್ರಮ ಲೋಕಾರ್ಪಣೆಗೊಳ್ಳಲಿದೆ.
ಮಹಾತ್ಮ ಗಾಂಧೀಜಿ ಜೀವನ ಸಂದೇಶ ಸಾರುವ ಸಾಬರಮತಿ ಆಶ್ರಮದ ಪ್ರತಿಕೃತಿಯ ಸುಂದರ ಕಟ್ಟಡ ವಿವಿ ಆವರಣದಲ್ಲಿ ತಲೆ ಎತ್ತಿದೆ. ಇದು ರಾಜ್ಯದ ಎರಡನೇ ಹಾಗೂ ಉತ್ತರಕರ್ನಾಟಕದ ಪ್ರಥಮ ಗಾಂಧೀಜಿ ಆಶ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ಮತ್ತೊಂದು ವಿಶೇಷ.
ಇಲ್ಲಿ ಗಾಂಧೀಜಿ ತತ್ವ, ಸಿದ್ಧಾಂತ, ಚಿಂತನೆ ಮತ್ತು ಆದರ್ಶಗಳ ತಳಹದಿಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದೆ. ಗಾಂಧಿ ಚಿಂತನೆಗಳೊಂದಿಗೆ ಗ್ರಾಮೀಣ ಜೀವನದಲ್ಲಿ ಗುಣಾತ್ಮಕ ಬದಲಾವಣೆ, ಯುವ ಜನರಲ್ಲಿ ಗಾಂಧಿ ಚಿಂತನೆಗಳನ್ನ ಒಡಮೂಡಿಸುವುದು, ಸಮಾಜದಲ್ಲಿ ಶಾಂತಿ, ಅಹಿಂಸೆ ಹಾಗೂ ಸಮಾನತೆ ಭಾವನೆಗಳನ್ನು ಗಟ್ಟಿಗೊಳಿಸುವುದು ಇದರ ಉದ್ದೇಶ.
ನಾಗಾವಿಯ ಗುಡ್ಡದಲ್ಲಿರುವ ವಿವಿ ಕ್ಯಾಂಪಸ್ನಲ್ಲಿ 50 ಅಡಿ ಉದ್ದ ಮತ್ತು 70 ಅಡಿ ಅಗಲ ವಿಸ್ತ್ರೀರ್ಣದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಈ ಆಶ್ರಮ ನಿರ್ಮಾಣವಾಗಿದೆ. ಪ್ರಾಂಗಣದಲ್ಲಿ ಗಾಂಧೀಜಿ ಅವರ ಜ್ಞಾನಮೂರ್ತಿ, ಗೋಡೆಗಳಿಗೆ ಏಳು ಸಾಮಾಜಿಕ ತತ್ವಗಳು, 18 ರಚನಾತ್ಮಕ ಕಾರ್ಯಕ್ರಮದ ಅಂಶಗಳು, ರಾಷ್ಟ್ರಧ್ವಜ ಫಲಕ ಅವಳವಡಿಸಲಾಗಿದೆ. ಕಸ್ತೂರಿ ಬಾ ಕುಟೀರದಲ್ಲಿ ಗಾಂಧೀಜಿ ಅವರ ಚರಕ, ಜೀವನ ಚರಿತ್ರೆ ಬಿಂಬಿಸುವ ಛಾಯಾಚಿತ್ರಗಳನ್ನು ಇರಿಸಲಾಗಿದೆ.
ನಯಿತಾಲಿಮ್ ಕೇಂದ್ರದಲ್ಲಿ ಕರಕುಶಲ ವಸ್ತುಗಳು, ಗುಡಿಕೈಗಾರಿಕೆ, ಗ್ರಾಮ ಉದ್ಯಮಗಳನ್ನು ಬಿಂಬಿಸುವ ಬಿದಿರು ಬುಟ್ಟಿ, ಮರದಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ತರಬೇತಿಗೆ ಉದ್ದೇಶಿಸಲಾಗಿದೆ. ಸಾಬರಮತಿ ಆಶ್ರಮ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಂದರ್ಶಿತರಿಗೆ ಪ್ರೇರಣಾದಾಯಕವಾಗಬೇಕು ಅನ್ನುವ ದೃಷ್ಟಿಯಿಂದ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ವಿವಿ ಉಪಕುಲಪತಿ ವಿಷ್ಣುಕಾಂತ್ ಚಟಪಲ್ಲಿ.
ಈ ರೀತಿಯ ಗಾಂಧಿ ಚಿಂತನಗೆಳನ್ನು ಸಾರುವ ಸಾಬರಮತಿ ಆಶ್ರಮ ಮೈಸೂರು ಬಿಟ್ಟರೆ ಉತ್ತರ ಕರ್ನಾಟಕ ಭಾಗವಾದ ಗದಗದಲ್ಲಿ ಮಾತ್ರ ಕಾಣಸಿಗುತ್ತದೆ ಅನ್ನೋದು ಹೆಮ್ಮೆಯ ವಿಶಯ. ಇಂತಹ ಅಪರೂಪದ ದೃಶ್ಯ ನೋಡುವ ಭಾಗ್ಯ ಇದೀಗ ಒದಗಿ ಬಂದಿದೆ.